ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು ವಿಭಿನ್ನ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಸಾಮಾಜಿಕ, ಶೈಕ್ಷಣಿಕ, ಪರಿಸರ ರಕ್ಷಣೆ, ಆದಿವಾಸಿಗಳು, ಅಂಗವಿಕಲರು ಮತ್ತು ಮಹಿಳೆಯರ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ತೊಡಗಿರುವ ಸರ್ಕಾರೇತರ ಸಂಸ್ಥೆಗಳು ತಮ್ಮ ವೈಶಿಷ್ಟ್ಯಪೂರ್ಣ ಚಟುವಟಿಕೆಗಳನ್ನು ಇಲ್ಲಿ ಅನಾವರಣಗೊಳಿಸಿದವು.
ಶನಿವಾರ ಆರಂಭಗೊಂಡ ಈ ಹಬ್ಬದಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ 72 ಸಂಸ್ಥೆಗಳು ಪಾಲ್ಗೊಂಡಿವೆ. ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ ಆಯೋಜಿಸಿರುವ ಎರಡು ದಿನಗಳ ‘ಬಿಐಸಿ ಹಬ್ಬ’ ಈ ಸಂಸ್ಥೆಗಳ ವಿಶೇಷತೆಗಳನ್ನು ನಗರದ ಜನತೆಗೆ ಪರಿಚಯಿಸುತ್ತಿದೆ.
ಆದಿವಾಸಿಗಳೇ ತಯಾರಿಸಿರುವ ನೋವು ನಿವಾರಕ ತೈಲ, ಜೇನುತುಪ್ಪ ಸೇರಿ ಹಲವು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗಿದೆ. ತಮಿಳುನಾಡಿನ ಗುಡಲೂರಿನ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆದಿವಾಸಿಗಳು ಅರಣ್ಯ ಉತ್ಪನ್ನಗಳಿಗೆ ಹೊಸ ರೂಪ ನೀಡಿ ಮಾರಾಟ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಈ ಆದಿವಾಸಿಗಳಿಗೆ ‘ಅಕಾರ್ಡ್’ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಆದಿವಾಸಿಗಳ ಪುನರ್ವಸತಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ.
ಆದಿವಾಸಿ ಮುನ್ನೇತ್ರ ಸಂಗಂ (ಎಎಂಎಸ್) ಸ್ಥಾಪಿಸಲು ನೆರವಾಗಿದೆ. ಬೆಟ್ಟ ಕುರುಬ, ಮುಳ್ಳುಕುರುಬ, ಪನಿಯಾ, ಕಟ್ಟುನಾಯಕ ಪಂಗಡಗಳನ್ನು ಸೇರಿಸಿಕೊಂಡು ಸುಮಾರು 20 ಸಾವಿರ ಆದಿವಾಸಿಗಳು ಈ ಸಂಘಟನೆಯಲ್ಲಿ ಸೇರಿದ್ದಾರೆ. 320 ಹಳ್ಳಿಗಳಲ್ಲಿ ಅಕಾರ್ಡ್ ಚಟುವಟಿಕೆಗಳನ್ನು ಕೈಗೊಂಡಿದೆ.
‘ಬದುಕುವ ಹಕ್ಕುಗಳಿಗಾಗಿ 1980ರಿಂದ ಸುಮಾರು 30 ವರ್ಷಗಳ ಕಾಲ ನಡೆಸಿದ ಹೋರಾಟದಿಂದ ಆದಿವಾಸಿಗಳು ನೆಲೆ ಕಂಡುಕೊಂಡಿದ್ದಾರೆ. ಆದರೆ, ಇತ್ತೀಚೆಗೆ ಯುವಕರು ನಗರಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ, ಅರಣ್ಯ ಉತ್ಪನ್ನಗಳನ್ನು ಸಿದ್ಧಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸಂಸ್ಥೆಯ ಉನ್ನಿಕೃಷ್ಣನ್ ವಿವರಿಸಿದರು.
ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳಿಗೆ ಆಶ್ರಯ ನೀಡುವ ಕಾರ್ಯದಲ್ಲಿ ತೊಡಗಿರುವ ‘ಸಾಥಿ’, ಒಂಬತ್ತು ರಾಜ್ಯಗಳಲ್ಲಿ ಕೈಗೊಂಡಿರುವ ಚಟುವಟಿಕೆಗಳನ್ನು ಉತ್ಸವದಲ್ಲಿ ಬಿಂಬಿಸಿತ್ತು. 25 ವರ್ಷಗಳಲ್ಲಿ ‘ಸಾಥಿ’ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ನೆರವಾಗಿದೆ. 50ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಪೋಷಕರ ಜತೆ ಮರು ಒಗ್ಗೂಡಿಸಿದೆ ಎಂದು ಸಂಸ್ಥೆಯ ಉಪ ಕಾರ್ಯದರ್ಶಿ ಎಂ. ರಾಜಶೇಖರ್ ವಿವರಿಸಿದರು.
ಮಕ್ಕಳನ್ನು ವಿಜ್ಞಾನದ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸುವ ಕಾರ್ಯದಲ್ಲಿ ತೊಡಗಿರುವ ‘ಅಗಸ್ತ್ಯಾ’ ಅಂತರ
ರಾಷ್ಟ್ರೀಯ ಫೌಂಡೇಷನ್, 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಪಠ್ಯ ಮತ್ತು ಪಠ್ಯೇತರ ವಿಷಯಗಳನ್ನು ಸುಲಭವಾಗಿ ಅರ್ಥೈಸುವ ಕಾರ್ಯದಲ್ಲಿ ತೊಡಗಿದೆ. ಇದುವರೆಗೆ ಸಂಸ್ಥೆಯ ಚಟುವಟಿಕೆಗಳಲ್ಲಿ 18 ರಾಜ್ಯಗಳಲ್ಲಿನ 80 ಲಕ್ಷ ಮಕ್ಕಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದಾರೆ.
ವಿಶೇಷ ಸಾಮರ್ಥ್ಯದ ಮಕ್ಕಳ ಯೋಗಕ್ಷೇಮ ಮತ್ತು ವಿವಿಧ ಉತ್ಪನ್ನಗಳನ್ನು ತಯಾರಿಸಲು ತರಬೇತಿ ನೀಡುತ್ತಿರುವ ಬೆಂಗಳೂರಿನ ಅಸೋಸಿಯೇಷನ್ ಫಾರ್ ಮೆಂಟಲಿ ಚಾಲೆಂಜ್ಡ್ ಸಂಸ್ಥೆಯು ಇದುವರೆಗೆ ಕೈಗೊಂಡಿರುವ ಚಟುವಟಿಕೆಗಳನ್ನು ಬಿಂಬಿಸಿತ್ತು. ಸೋಲಿಗ ಸಮುದಾಯದವರು ಲಂಟನಾದಿಂದ ತಯಾರಿಸಿರುವ ಉತ್ಪನ್ನಗಳನ್ನು ‘ಲಂಟನಾ ಕರಕುಶಲ ಕೇಂದ್ರ’ ಪ್ರದರ್ಶಿಸಿತ್ತು. ಕುರ್ಚಿ, ಸೋಫಾ ಸೇರಿವಿವಿಧ ಉತ್ಪನ್ನಗಳನ್ನು ಲಂಟನಾದಿಂದ ತಯಾರಿಸಿ ಕರ್ನಾಟಕ, ತಮಿಳುನಾಡು ಸೇರಿ ಹಲವಾರು ರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕೇಂದ್ರದ ಕುಮಾರ್ ವಿವರಿಸಿದರು.
ಮಕ್ಕಳಿಗೆ ಕಾರ್ಯಾಗಾರ
‘ಬಾಲ ಜನಾಗ್ರಹ’ ಸಂಸ್ಥೆ ವತಿಯಿಂದ ‘ನನ್ನ ನಗರ, ನನ್ನ ಸವಾಲುಗಳು’ ಕುರಿತು ಮಕ್ಕಳಿಗೆ ಕಾರ್ಯಾಗಾರ ನಡೆಯಿತು. 8,9 ಮತ್ತು 10ನೇ ತರಗತಿಯ ಸುಮಾರು 30 ಮಕ್ಕಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸ್ವಚ್ಛತೆ, ರಸ್ತೆ, ಸುರಕ್ಷತೆ, ತಾಜ್ಯ ನಿರ್ವಹಣೆ, ಸ್ಥಳೀಯ ಆಡಳಿತ, ನೀರು ಮತ್ತು ವಿದ್ಯುತ್ ಬಳಕೆ ಮುಂತಾದ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.
ಹೆಣ್ಣಿನ ಒಳದನಿ ‘ಡೆಸ್ಡೆಮೋನಾ ರೂಪಕಂ’
‘ಬಿಐಸಿ ಹಬ್ಬ’ದಲ್ಲಿ ನಳಂದ ಆರ್ಟ್ಸ್ ಸ್ಟುಡಿಯೊ ಪ್ರಸ್ತುತ ಪಡಿಸಿದ ‘ಡೆಸ್ಡೆಮೋನಾ ರೂಪಕಂ’ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಖ್ಯಾತ ಗಾಯಕಿಯರಾದ ಎಂ.ಡಿ. ಪಲ್ಲವಿ ಮತ್ತು ಬಿಂದುಮಾಲಿನಿ ‘ಡೆಸ್ಡೆಮೋನಾ ರೂಪಕಂ’ ಮೂಲಕ, ಪುರಾಣ, ಇತಿಹಾಸ, ವರ್ತಮಾನ ಕಾಲ ಯಾವುದೇ ಇರಲಿ ಹೆಣ್ಣು ವಿವಿಧ ಸಂದರ್ಭಗಳಲ್ಲಿ ಎದುರಿಸುವ ಸನ್ನಿವೇಶಗಳನ್ನು ಅನಾವರಣಗೊಳಿಸಿದರು.
ವಿಲಿಯಮ್ ಷೇಕ್ಸ್‌ಪಿಯರ್ ಅವರ ಒಥೆಲೊದ ‘ಡೆಸ್ಡೆಮೋನಾ’ದ ಜತೆ, ಜತೆಯಲ್ಲಿ ಜಮದಗ್ನಿಯ ರೇಣುಕೆಯನ್ನು ಪ್ರಸ್ತುತಪಡಿಸುವ ಮೂಲಕ ಪುರಾಣ, ಇತಿಹಾಸ, ವರ್ತಮಾನದಲ್ಲಿ ಮೌನವಾಗಿರುವ ಹೆಣ್ಣಿನ ದನಿಯನ್ನು ರಂಗದ ಮೇಲೆ ತೆರೆದಿಡುವ ಪ‍್ರಯತ್ನ ಮಾಡಲಾಗಿದೆ. ಅಭಿಷೇಕ್ ಮಜುಂದಾರ್ ಈ ನಾಟಕ ಪ್ರದರ್ಶಿಸಿದ್ದಾರೆ. ಹಿಂದೂಸ್ತಾನಿ, ಕರ್ನಾಟಕ ಮತ್ತು ಜಾನಪದ ಸಂಗೀತವನ್ನು ನಾಟಕದಲ್ಲಿ ಅಳವಡಿಸಿಕೊಳ್ಳಲಾಗಿದೆ.
ಇಂದು ಸಂಗೀತ ಕಾರ್ಯಕ್ರಮ
ಕರ್ನಾಟಕ ಸಂಗೀತದ ‘ಪ್ರಕೃತಿ ಸ್ವರಾಸ್’ ಹೆಸರಿನಲ್ಲಿ ಭಾನುವಾರ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 12.45ರವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ.
ನೃತ್ಯ ಕಾರ್ಯಕ್ರಮ ‘ರಸಾಭಿಜ್ಞಾನ’ವು ಸಂಜೆ 6.30ರಿಂದ 8 ಗಂಟೆಯವರೆಗೆ ನಡೆಯಲಿದೆ. ಜತೆಗೆ, ಮಕ್ಕಳಿಗೂ ವಿವಿಧ ವಿಷಯಗಳ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.