ADVERTISEMENT

ರಾಷ್ಟ್ರವಾದದ ಅಬ್ಬರಕ್ಕೆ ಸ್ಥಳೀಯ ಭಾಷೆ ತತ್ತರ: ಸುಗತ ಶ್ರೀನಿವಾಸರಾಜು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 19:33 IST
Last Updated 23 ಫೆಬ್ರುವರಿ 2020, 19:33 IST
ಸುಗತ ಶ್ರೀನಿವಾಸ
ಸುಗತ ಶ್ರೀನಿವಾಸ   

ಬೆಂಗಳೂರು: ‘ಹಲವು ಸಂಸ್ಕೃತಿಗಳ ಮತ್ತು ಸ್ಥಳಗಳ ಮಹತ್ವ ಸಾರುವ ಸ್ಥಳೀಯಭಾಷೆಗಳು ರಾಷ್ಟ್ರವಾದದ ಅಬ್ಬರದ ಎದುರು ದೊಡ್ಡ ಹೋರಾಟ ನಡೆಸಬೇಕಾಗಿದೆ. ಸಮೂಹ ಮಾಧ್ಯಮಗಳು ಕೂಡ ರಾಷ್ಟ್ರವಾದ ಮತ್ತು ಉಪರಾಷ್ಟ್ರವಾದದ ಬೆನ್ನು ಬಿದ್ದಿವೆ’ ಎಂದು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು
ಅಭಿಪ್ರಾಯಪಟ್ಟರು.

‘ಭಾಷೆ ಮತ್ತು ನಗರ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಭಾಷೆಯು ಅದು ಹೊಂದಿ
ರಬಹುದಾದ ಉದ್ಯೋಗಾರ್ಹತೆಯ ಮೇಲೆ ಇಂದು ಅದರ ಮಹತ್ವವನ್ನು ಅಳೆಯಲಾಗುತ್ತಿದೆ’ ಎಂದರು.

‘ಶಿವಾಜಿನಗರದ ಕಂಟೋನ್ಮೆಂಟ್‌ನಂತಹ ಪ್ರದೇಶದಲ್ಲಿ ಯುವಕನೊಬ್ಬ ಯಾವುದೇ ಶಿಕ್ಷಣ ಪಡೆಯದೇ ಬ್ರಿಟಿಷ್‌ ಶೈಲಿ ಇಂಗ್ಲಿಷ್‌ ಕಲಿತಿದ್ದರೆ, ನಗರದ ಬಹುರಾಷ್ಟ್ರೀಯ ಕಂಪನಿಯಲ್ಲಿ ಸುಲಭವಾಗಿ ಕೆಲಸ ಪಡೆಯುತ್ತಾನೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು, ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಯುವಕನೊಬ್ಬನಿಗೆಇಂಗ್ಲಿಷ್‌ ಬಾರದಿದ್ದರೆ ಅವನು ನಿರೀಕ್ಷಿಸಿದ ಉದ್ಯೋಗ ಪಡೆಯುವುದು ಕಷ್ಟ’ ಎಂದರು.

ADVERTISEMENT

‘ಇಂಥದ್ದೇ ಭಾಷೆ ಕಲಿಯಬೇಕು ಎಂದು ಹೇಳುವ ಸರ್ಕಾರಗಳು, ಅದಕ್ಕೆ ತಕ್ಕ ಉದ್ಯೋಗ ಕಲ್ಪಿಸುವ ಭರವಸೆ ಈಡೇರಿಸಲಿವೆಯೇ’ ಎಂದು ಪ್ರಶ್ನಿಸಿದರು.

ಮನೆ ಭಾಷೆ–ಕಚೇರಿ→ಭಾಷೆ: ‘ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿ ಪಶು ಸಂಗೋಪನೆ ಸಚಿವ
ಪ್ರಭು ಚೌಹಾಣ್‌ ಅವರು ‘ಕರ್ನಾಟಕ್‌’ಎಂದು ಉಚ್ಚರಿಸಿದಾಗ, ಸಿದ್ದರಾಮಯ್ಯ ಅವರು ‘ಅದು
ಕರ್ನಾಟಕ್‌ ಅಲ್ಲ, ಕರ್ನಾಟಕ. ಸಚಿವನಾಗಿದ್ದುಕೊಂಡು ರಾಜ್ಯದ ಹೆಸರನ್ನು ಸರಿಯಾಗಿ ಹೇಳುವುದಿಲ್ಲವಲ್ಲ’ ಎಂದು ಟೀಕಿಸಿದರು. ಸಿದ್ದರಾಮಯ್ಯ ಅವರ ಆ ನಡೆ ಸರಿಯಲ್ಲ’ ಎಂದರು.

‘ಚೌಹಾಣ್‌ ಮಾತೃಭಾಷೆ ಕನ್ನಡವಲ್ಲ. ಅಲ್ಲದೆ, ಅವರದು ಬೀದರ್‌ ಜಿಲ್ಲೆ.ಅಲ್ಲಿ ಕನ್ನಡದ ಪ್ರಭಾವ ಕಡಿಮೆ. ಸಿದ್ದರಾಮಯ್ಯ ಹಳೇ ಮೈಸೂರು ಭಾಗದವರು. ಅಲ್ಲಿ ಅಪ್ಪಟ ಕನ್ನಡದ ವಾತಾವರಣವಿದೆ. ಚೌಹಾಣ್‌ ಕನ್ನಡ ಮಾತನಾಡಲು ಪ್ರಯತ್ನಿಸಿದ್ದಕ್ಕೆ ಅವರು ಶ್ಲಾಘಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಿಕರೊಬ್ಬರು, ‘ಯಾವುದೇ ವ್ಯಕ್ತಿಯು, ಮನೆ ಭಾಷೆ, ಬೀದಿ ಭಾಷೆ ಮತ್ತು ಕಚೇರಿ ಭಾಷೆ ಬಳಸಬೇಕಾಗುತ್ತದೆ. ಪ್ರಭು ಚೌಹಾಣ್‌ ಅವರ ಮನೆ ಭಾಷೆ ಯಾವುದೇ ಇರಲಿ, ಆದರೆ, ಅವರು ರಾಜ್ಯಭಾಷೆಯಾಗಿರುವ ಕನ್ನಡವನ್ನು ಕಲಿಯಲೇಬೇಕು. ಸಚಿವರಾಗಿದ್ದುಕೊಂಡು ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡದೇ ಇರುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.