ಬೆಂಗಳೂರು: ‘ಬಿಐಸಿ ಜಾನಪದ’ ಸರಣಿಯ ಅಂಗವಾಗಿ ದೊಮ್ಮಲೂರು ಎರಡನೇ ಹಂತದಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ(ಬಿಐಸಿ)ದಲ್ಲಿ ಶುಕ್ರವಾರ ಸಂಜೆ ಕಂಸಾಳೆ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ.
ತ್ವರಿತ ಆರ್ಟ್ಸ್ಟ್ ಕಲೆಕ್ಟಿವ್ ಇಂಡಿಯಾ ಮತ್ತು ಬಿಐಸಿ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸಂಜೆ 6.30ರಿಂದ 8ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಕಂಸಾಳೆ ನೃತ್ಯದ ಸೊಬಗನ್ನು ಆಸ್ವಾದಿಸುವ ಅವಕಾಶ ದೊರಕಲಿದೆ.
ಈ ಕಾರ್ಯಕ್ರಮದಲ್ಲಿ ಕಂಸಾಳೆ ಕುರಿತ ಚರ್ಚೆ, ಸಂವಾದ, ಕಂಸಾಳೆ ನೃತ್ಯದ ವಿವಿಧ ಭಂಗಿಗಳನ್ನು ಅರಿಯುವುದು, ಕಂಸಾಳೆ ವಾದ್ಯ ಸಾಧನಗಳ ಕುರಿತು ತಿಳಿಯಲು ಅವಕಾಶ ಇರುತ್ತದೆ. ಕಂಸಾಳೆ ನೃತ್ಯ ಪ್ರದರ್ಶನದ ಜೊತೆಯಲ್ಲೇ ನೃತ್ಯ ಪ್ರಕಾರಕ್ಕೆ ಸಂಬಂಧಿಸಿದ ಇತಿಹಾಸವನ್ನೂ ತಿಳಿಸಲಾಗುತ್ತದೆ. ಕಂಸಾಳೆಯು ಮಹದೇಶ್ವರನ ಆರಾಧನೆಯ ಭಾಗವಾಗಿ ಪ್ರದರ್ಶಿಸುವ ಕಲೆ. ಇದು ಹೆಜ್ಜೆ ಹಾಕುವುದು, ಆಕರ್ಷಕ ಘೋಷಣೆಗಳನ್ನೂ ಒಳಗೊಂಡಿದೆ. ಕಂಸಾಳೆಯ ಚರಿತ್ರೆಯನ್ನು ಅರಿಯುತ್ತಲೇ ಈ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದು ಬಿಐಸಿ ಪ್ರಕಟಣೆ ತಿಳಿಸಿದೆ.
ಬಿಐಸಿ ಜಾನಪದ ಸರಣಿಯ ಅಂಗವಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ಜಾನಪದ ಕಲಾ ಪ್ರಕಾರಗಳಿಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದು ಎರಡನೆಯ ಕಾರ್ಯಕ್ರಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.