ADVERTISEMENT

ಬಿಐಇಸಿ ಆರೈಕೆ ಕೇಂದ್ರ ವಾರದೊಳಗೆ ಸಿದ್ಧ: ಬಿ.ಎಸ್‌. ಯಡಿಯೂರಪ್ಪ

ಮೂಲಸೌಕರ್ಯ ಪರಿಶೀಲಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 4:05 IST
Last Updated 10 ಜುಲೈ 2020, 4:05 IST
ಆರೈಕೆ ಕೇಂದ್ರವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ಪರಿಶೀಲಿಸಿದರು. ಈ ವೇಳೆ ಸೋಂಕಿತರ ಆರೈಕೆಗೆ ಬಳಸುವ ರೋಬೋಟ್‌ ಬಗ್ಗೆ ಕೋವಿಡ್‌ ಪರೀಕ್ಷೆಯ ನೋಡಲ್‌ ಅಧಿಕಾರಿ ಡಾ.ಸಿ.ಎನ್‌.ಮಂಜುನಾಥ್‌ ವಿವರಿಸಿದರು. ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌. ಅಶೋಕ, ಡಾ.ಕೆ. ಸುಧಾಕರ್‌, ಬಿ. ಶ್ರೀರಾಮುಲು ಇದ್ದರು
ಆರೈಕೆ ಕೇಂದ್ರವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ಪರಿಶೀಲಿಸಿದರು. ಈ ವೇಳೆ ಸೋಂಕಿತರ ಆರೈಕೆಗೆ ಬಳಸುವ ರೋಬೋಟ್‌ ಬಗ್ಗೆ ಕೋವಿಡ್‌ ಪರೀಕ್ಷೆಯ ನೋಡಲ್‌ ಅಧಿಕಾರಿ ಡಾ.ಸಿ.ಎನ್‌.ಮಂಜುನಾಥ್‌ ವಿವರಿಸಿದರು. ಸಚಿವರಾದ ಬಸವರಾಜ ಬೊಮ್ಮಾಯಿ, ಆರ್‌. ಅಶೋಕ, ಡಾ.ಕೆ. ಸುಧಾಕರ್‌, ಬಿ. ಶ್ರೀರಾಮುಲು ಇದ್ದರು   

ಬೆಂಗಳೂರು: ‘ತುಮಕೂರು ರಸ್ತೆ ಬಳಿ ಇರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆರಂಭಿಸಲಾಗುವ ‘ಕೋವಿಡ್‌ ಆರೈಕೆ ಕೇಂದ್ರ’ ವಾರದೊಳಗೆ ಸಿದ್ಧವಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಈ ಕೇಂದ್ರದಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಇತರರು ಸೇರಿ ಒಟ್ಟು 2,200 ಸಿಬ್ಬಂದಿಯನ್ನು ನೇಮಿಸಲಾಗುವುದು. ಪ್ರತಿ ನೂರು ರೋಗಿಗಳಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್‌ಗಳು, ಒಬ್ಬ ಸಹಾಯಕರು, ಒಬ್ಬರು ಸ್ವಚ್ಛತಾ ಸಿಬ್ಬಂದಿ ಮತ್ತು ಇಬ್ಬರು ಬಿಬಿಎಂಪಿ ಮಾರ್ಷಲ್‌ಗಳನ್ನು ನಿಯೋಜಿಸಲಾಗುವುದು. ಕೇಂದ್ರವನ್ನು ಸಮೀಪದ ಆಸ್ಪತ್ರೆಯೊಂದಿಗೆಸಂಯೋಜಿಸಲಾಗುವುದು. ನಿಯಂತ್ರಣ ಕೊಠಡಿ ದಿನದ24 ಗಂಟೆಯೂ ಕಾರ್ಯನಿರ್ವಹಿಸಲಿದೆ’ ಎಂದು ವಿವರಿಸಿದರು.

‘ಸೋಂಕು ತಗುಲಿರುವುದು ದೃಢಪಟ್ಟ ತಕ್ಷಣ ಆಂಬುಲೆನ್ಸ್ ಬರುವುದು ವಿಳಂಬವಾದರೆ ಅಥವಾ ಆಸ್ಪತ್ರೆಗೆ ದಾಖಲಿಸಲು ವಿನಾ ಕಾರಣ ನಿರಾಕರಿಸಿದರೆ ಕ್ರಮ ಕೈಗೊಳ್ಳಲಾಗುವುದು. ಜನರು ವಿಶ್ವಾಸ ಕಳೆದುಕೊಳ್ಳದೆ ತಾಳ್ಮೆಯಿಂದ ಸಹಕರಿಸಬೇಕು’ ಎಂದೂ ಮನವಿ ಮಾಡಿದರು.

ADVERTISEMENT

‘ಅನ್‌ಲಾಕ್ ಪ್ರಕ್ರಿಯೆ ಆರಂಭವಾದಾಗಿನಿಂದ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರಿನಿಂದ ಯಾರೂ ಹಳ್ಳಿಗಳಿಗೆ ಹೋಗಬೇಡಿ. ಹಳ್ಳಿಗಳಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಅನೇಕ ತಿಂಗಳುಗಳವರೆಗೆ ಈ ಸಮಸ್ಯೆ ಎದುರಿಸಬೇಕಾಗಿದೆ. ಸೋಂಕು ನಿಯಂತ್ರಿಸಲು ಎಲ್ಲರೂ ಸೇರಿ ಪ್ರಾಮಾಣಿಕ ಯತ್ನ ಮಾಡುತ್ತಿದ್ದೇವೆ’ ಎಂದರು.

‘ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡಬಾರದು. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಸಭೆ ನಡೆಸಿ ಖಾಸಗಿ ಆಸ್ಪತ್ರೆಗಳ ಮಂಡಳಿಗಳ ಜೊತೆ ಮಾತನಾಡಿದ್ದಾರೆ. ಸುಲಿಗೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಅತ್ಯಾಧುನಿಕ ಸೌಲಭ್ಯ

ಈ ಕೇಂದ್ರದಲ್ಲಿ ಹೈ ಸ್ಪೀಡ್‌ ವೈಫೈ, ಸಿನಿಮಾ ವೀಕ್ಷಣೆಗೆ ದೊಡ್ಡ ಪರದೆ, ಟಿ.ವಿಗಳು, ಪ್ರತಿ ಹಾಸಿಗೆಗೆ ಟೇಬಲ್‌ ಫ್ಯಾನ್‌, ನಾಟಕ, ನೃತ್ಯ ಮತ್ತಿತರ ಮನರಂಜನೆ ನೀಡುವವರಿಗೆ ಪ್ರತ್ಯೇಕ ವೇದಿಕೆ ಇರಲಿದೆ.

ಸೋಂಕಿತರ ಪೈಕಿ ಐಟಿ ಉದ್ಯೋಗಿಗಳಾಗಿದ್ದವರು ಅಲ್ಲಿಂದಲೇ ಕಚೇರಿ ಕೆಲಸ ಮಾಡಲು ಬಯಸಿದರೆ ಅದಕ್ಕೆಂದೇ ಕಂಪ್ಯೂಟರ್‌ಗಳು, ಮಕ್ಕಳಿಗೆ ಆಟವಾಡಲು ಸೌಲಭ್ಯ, ಮನರಂಜನೆಗೆ ಕೇರಂ ಬೋರ್ಡ್, ಚೆಸ್‌ ಆಡಲು ವ್ಯವಸ್ಥೆ ಇರಲಿದೆ. ಅಲ್ಲದೆ, ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ಸೋಂಕಿತರು ಬಳಸುವ ಹೊದಿಕೆ, ಬೆಡ್ ಶೀಟ್ ತೊಳೆಯಲು ಲಾಂಡ್ರಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.