ADVERTISEMENT

ಬಿಹಾರ ಸಿ.ಎಂ ಅವಹೇಳನ: ಬಿಜೆಪಿ ಮುಖಂಡ ಸೇರಿ ಮೂವರು ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 0:33 IST
Last Updated 23 ಜುಲೈ 2023, 0:33 IST
ನಂದ್‌ಕುಮಾರ್
ನಂದ್‌ಕುಮಾರ್   

ಬೆಂಗಳೂರು: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರನ್ನು ಅವಹೇಳನ ಮಾಡುವ ರೀತಿಯಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದ ಆರೋಪದಡಿ ಬಿಜೆಪಿ ಮುಖಂಡ ಸೇರಿ ಮೂವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶೇಷಾದ್ರಿಪುರ ಎರಡನೇ ಮುಖ್ಯರಸ್ತೆಯ ನಿವಾಸಿ ಎಂ. ಶ್ರೀರಾಮ್ (48), ರಸಿಲ್ದಾರ್ ಸ್ಟ್ರೀಟ್‌ನ ನಂದ್‌ಕುಮಾರ್ (30) ಹಾಗೂ ಕೆ. ಮೋಹನ್ (42) ಬಂಧಿತರು.

‘ಆರೋಪಿ ಶ್ರೀರಾಮ್, ಬಿಜೆಪಿಯ ಶೇಷಾದ್ರಿಪುರ ಪ್ರದೇಶದ ಮುಖಂಡ. ಫ್ಲೆಕ್ಸ್ ಅಳವಡಿಕೆ ಕೆಲಸಗಾರರಾದ ನಂದ್‌ಕುಮಾರ್ ಹಾಗೂ ಮೋಹನ್ ಜೊತೆ ಕೃತ್ಯ ಎಸಗಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತಾಜ್‌ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಇತ್ತೀಚೆಗೆ ಕೇಂದ್ರ ವಿರೋಧ ಪಕ್ಷಗಳ ನಾಯಕ ಸಭೆ ಆಯೋಜಿಸಲಾಗಿತ್ತು. ಖನಿಜ ಭವನ ಹಾಗೂ ಶಕ್ತಿ ಭವನ ಮುಂಭಾಗ, ಟ್ರಿಲೈಟ್ ಜಂಕ್ಷನ್, ಹರೇಕೃಷ್ಣ ರಸ್ತೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ, ಚಾಲುಕ್ಯ ವೃತ್ತ ಹಾಗೂ ಇತರೆಡೆ ಫ್ಲೆಕ್ಸ್‌ ಅಳವಡಿಸಲಾಗಿತ್ತು. ಇದು ಹೈಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

‘ಪ್ರಧಾನಿ ಹುದ್ದೆಯ ಅನಿಶ್ಚಿತ ಆಕಾಂಕ್ಷಿ’ ಎಂಬ ಬರಹವಿದ್ದ ಫ್ಲೆಕ್ಸ್‌ನಲ್ಲಿ ನಿತೀಶ್‌ಕುಮಾರ್ ಭಾವಚಿತ್ರವಿತ್ತು. ಸುಲ್ತಾನ್ ಗಂಜ್ ಸೇತುವೆ ಕುಸಿತದ ಚಿತ್ರಗಳಿದ್ದವು. ಫ್ಲೆಕ್ಸ್ ಅಳವಡಿಸಲು ಯಾವುದೇ ಅನುಮತಿ ಪಡೆದಿರಲಿಲ್ಲ’ ಎಂದು ಮೂಲಗಳು ಹೇಳಿವೆ.

ಫ್ಲೆಕ್ಸ್‌ ಹಾಕಲು ಹಣ ಪಾವತಿ: ‘ಫ್ಲೆಕ್ಸ್ ಮುದ್ರಿಸುವ ಮಳಿಗೆಯಲ್ಲಿ ನಂದ್‌ಕುಮಾರ್ ಕೆಲಸ ಮಾಡುತ್ತಿದ್ದ. ಈತನಿಗೆ ಹಣ ನೀಡಿದ್ದ ಶ್ರೀರಾಮ್, ಫ್ಲೆಕ್ಸ್‌ ಮುದ್ರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಾಕುವಂತೆ ಹೇಳಿದ್ದ. ಮೋಹನ್‌ಗೆ ಸೇರಿದ್ದ ವಾಹನದಲ್ಲಿ ಫ್ಲೆಕ್ಸ್‌ಗಳನ್ನು ಸಾಗಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.