ADVERTISEMENT

ರಾಜಕಾಲುವೆಯಲ್ಲಿ ಬೈಕ್: ಕೆಲಕಾಲ ಆತಂಕ, ಕಾಲುವೆಗೆ ತಳ್ಳಿದ್ದ ಅಪರಿಚಿತರು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 2:31 IST
Last Updated 25 ನವೆಂಬರ್ 2022, 2:31 IST
ಬನಶಂಕರಿ 6ನೇ ಹಂತದ ಬಿಡಿಎ ಲೇಔಟ್‌ನ ರಾಜಕಾಲುವೆಯಲ್ಲಿ ಪತ್ತೆಯಾಗಿದ್ದ ಬೈಕ್
ಬನಶಂಕರಿ 6ನೇ ಹಂತದ ಬಿಡಿಎ ಲೇಔಟ್‌ನ ರಾಜಕಾಲುವೆಯಲ್ಲಿ ಪತ್ತೆಯಾಗಿದ್ದ ಬೈಕ್   

ಬೆಂಗಳೂರು: ಬನಶಂಕರಿ 6ನೇ ಹಂತದ ಬಿಡಿಎ ಲೇಔಟ್‌ನ ರಾಜಕಾಲುವೆಯಲ್ಲಿ ಬುಧವಾರ ರಾತ್ರಿ ಬೈಕ್ ಪತ್ತೆಯಾಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗುರುವಾರ ಸಂಜೆ ಬೈಕ್ ಮಾಲೀಕರ ಸುಳಿವು ಸಿಗುತ್ತಿದ್ದಂತೆ ಆತಂಕ ದೂರವಾಯಿತು.

‘ರಾಜಕಾಲುವೆಯಲ್ಲಿ ಬೈಕ್ ನೋಡಿ ಮಾಹಿತಿ ನೀಡಿದ್ದ ಸ್ಥಳೀಯರು, ‘ಯಾರೋ ಸವಾರ ಬೈಕ್‌ ಸಮೇತ ಕಾಲುವೆಯಲ್ಲಿ ಬಿದ್ದಿದ್ದಾರೆ. ಬೈಕ್ ಮಾತ್ರ ಕಾಣಿಸುತ್ತಿದ್ದು, ಸವಾರ ನಾಪತ್ತೆಯಾಗಿದ್ದಾರೆ’ ಎಂದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಮೇತ ಸ್ಥಳಕ್ಕೆ ಹೋಗಿ ಗುರುವಾರ ಇಡೀ ದಿನ ಕಾರ್ಯಾಚರಣೆ ನಡೆಸಲಾಯಿತು’ ಎಂದು ತಲಘಟ್ಟಪುರ ಪೊಲೀಸರು ಹೇಳಿದರು.

‘ಬೈಕ್ ಹೊರಗೆ ತೆಗೆದು, ಸವಾರನಿಗಾಗಿ ಹುಡುಕಾಟ ಮುಂದುವರಿಸಲಾಗಿತ್ತು. ಸಂಜೆ ಠಾಣೆಗೆ ಬಂದಿದ್ದ ವ್ಯಕ್ತಿಯೊಬ್ಬರು, ತಮ್ಮ ಬೈಕ್ ಕಳ್ಳತನವಾಗಿರುವುದಾಗಿ ಹೇಳಿದ್ದರು. ಅವರನ್ನು ಸ್ಥಳಕ್ಕೆ ಕರೆಸಿ ಬೈಕ್‌ ತೋರಿಸಿದಾಗ, ತಮ್ಮದೇ ಬೈಕ್ ಎಂಬುದಾಗಿ ಒಪ್ಪಿಕೊಂಡರು’ ಎಂದು ತಿಳಿಸಿದರು.

ADVERTISEMENT

ಕಾಲುವೆಗೆ ಬೈಕ್‌ ತಳ್ಳಿದ್ದ ಅಪರಿಚಿತರು: ‘ರಾಜಕಾಲುವೆ ಸಮೀಪದಲ್ಲಿ ವಾಸವಿರುವ ಸವಾರ, ಮನೆ ಎದುರು ಬೈಕ್ ನಿಲ್ಲಿಸಿದ್ದರು. ಅಪರಿಚಿತರು ಬೈಕ್ ಕಾಲುವೆಗೆ ತಳ್ಳಿದ್ದರು. ನಂತರ, ಬೈಕ್ ತೇಲಿಕೊಂಡು ದೂರಕ್ಕೆ ಹೋಗಿತ್ತು. ಅದನ್ನೇ ಸ್ಥಳೀಯರು ನೋಡಿ ಠಾಣೆಗೆ ಮಾಹಿತಿ ನೀಡಿದ್ದರು. ಸವಾರ ಸಿಕ್ಕ ನಂತರ, ಎಲ್ಲರ ಆತಂಕ ದೂರವಾಯಿತು’ ಎಂದು ಪೊಲೀಸರು ಹೇಳಿದರು.

ಸ್ಥಳೀಯರು, ‘ರಾಜಕಾಲುವೆಯ ತಡೆಗೋಡೆ ಕುಸಿದಿದೆ. ಸ್ಥಳೀಯರು ಭಯದಲ್ಲಿ ಬದುಕುತ್ತಿದ್ದಾರೆ. ಇದೇ ಕಾರಣಕ್ಕೆ, ಬೈಕ್ ಸಮೇತ ಯಾರಾದರೂ ಬಿದ್ದಿರಬಹುದೆಂದು ಅಂದುಕೊಂಡಿದ್ದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.