ADVERTISEMENT

ಬೈಕ್‌ ಟ್ಯಾಕ್ಸಿ: ರ್‍ಯಾಪಿಡೊ ಆರೋಪ ನಿರಾಕರಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 19:45 IST
Last Updated 14 ಜೂನ್ 2022, 19:45 IST
   

ಬೆಂಗಳೂರು:ಬೈಕ್‌ ಟ್ಯಾಕ್ಸಿಗಳಿಗೆ ಪರವಾನಗಿ ನೀಡುವ ಕುರಿತಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂಬ ಹೈಕೋರ್ಟ್‌ ಮಧ್ಯಂತರ ಆದೇಶ ಉಲ್ಲಂಘನೆ ಮಾಡಲಾಗಿದೆ ಎಂಬ ಖಾಸಗಿ ಕಂಪನಿಯ ಆರೋಪವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಬಲವಾಗಿ ತಳ್ಳಿಹಾಕಿದೆ.

ಬೈಕ್‌ ಟ್ಯಾಕ್ಸಿ ನಿರ್ವಹಣೆಯ ‘ರ್‍ಯಾಪಿಡೊ’ (ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್) ಕಂಪನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆಅರ್ಜಿದಾರ ಕಂಪನಿ ಪರ ವಕೀಲರು, ‘ಏಕಸದಸ್ಯ ನ್ಯಾಯಪೀಠವು 2021ರ ಆಗಸ್ಟ್‌ನಲ್ಲಿ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನೀಡಿದ್ದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿ ಸರ್ಕಾರಿ ಅಧಿಕಾರಿಗಳು ರ್‍ಯಾಪಿಡೊ ಕಂಪನಿಯ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಇದನ್ನು ಬಲವಾಗಿ ತಳ್ಳಿಹಾಕಿದ ಸರ್ಕಾರಿ ವಕೀಲರು, ‘ಸರ್ಕಾರ ಇನ್ನೂ ಬೈಕ್ ಟ್ಯಾಕ್ಸಿ ಓಡಿಸುವ ಕುರಿತಂತೆ ಪರವಾನಗಿ ನಿಯಮಗಳನ್ನು ರೂಪಿಸಿಲ್ಲ. ಹೀಗಾಗಿ, ಕಂಪನಿಯುಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶವನ್ನೇ ಪರವಾನಗಿ ಎಂದು ಪರಿಗಣಿಸಿ ಕಾರ್ಯ ನಿರ್ವಹಿಸುತ್ತಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡುವುದಾಗಿ ತಿಳಿಸಿ ಅಷ್ಟರೊಳಗೆ ಸರ್ಕಾರ ತನ್ನ ಲಿಖಿತ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿತು.

ಪ್ರಕರಣವೇನು?: ಕಳೆದ ವರ್ಷ ಕಂಪನಿಯು ಕರ್ನಾಟಕ ಎಲೆಕ್ಟ್ರಿಸಿಟಿ ಬೈಕ್ ಟ್ಯಾಕ್ಸಿ (ಕೆಇಬಿಟಿ) ಯೋಜನೆ–2021ರ ಅಡಿಯಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ಕೋರಿದ್ದಾಗ ಅದನ್ನು ಸಾರಿಗೆ ಆಯುಕ್ತರು ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ‘ಕಂಪನಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು‘ ಎಂದು ಮಧ್ಯಂತರ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.