ADVERTISEMENT

ಎಲ್‌ಇಟಿ ಸದಸ್ಯ ಬಿಲಾಲ್‌ಗೆ ಜೀವಾವಧಿ ಶಿಕ್ಷೆ ಕಾಯಂ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 20:30 IST
Last Updated 10 ಡಿಸೆಂಬರ್ 2019, 20:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ವಿಧಾನಸೌಧ, ಎಚ್‌ಎಎಲ್, ವಿಪ್ರೊ ಮತ್ತು ಇನ್ಫೊಸಿಸ್‌ನಂತಹ ಪ್ರಮುಖ ಐ.ಟಿ ಕಂಪನಿಗಳ ಮೇಲೆ ದಾಳಿ ನಡೆಸುವ ಪಿತೂರಿ ಮೇಲೆ ನಿಷೇಧಿತ ಲಷ್ಕರ್–ಇ–ತೊಯ್ಬಾ (ಎಲ್‌ಇಟಿ) ಸಂಘಟನೆ ಸದಸ್ಯ ಬಿಲಾಲ್ ಅಹಮದ್ ಕೋಟಾ ಅಲಿಯಾಸ್ ಇಮ್ರಾನ್ ಜಲಾಲ್‌ಗೆ (45) ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.

ಈ ಕುರಿತಂತೆ ಇಮ್ರಾನ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರವಿಮಳಿ ಮಠ ಮತ್ತು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ. ‘ಸುಳ್ಳು ಪ್ರಕರಣದಲ್ಲಿ ಆರೋಪಿಯನ್ನು ಸಿಲುಕಿಸಲಾಗಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳು ಇಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಅಪರಾಧಿಯು ರೈಫಲ್‌ ಹಾಗೂ ಜೀವಂತ ಗುಂಡುಗಳನ್ನು ಹೊಂದಿದ್ದನು. ಆ ಸಂಬಂಧ ತನಿಖಾಧಿಕಾರಿಗಳಿಗೆ ಯಾವುದೇ ಸ್ಪಷ್ಟನೆ ಹಾಗೂ ವಿವರ ನೀಡಿಲ್ಲ. ಆರೋಪಗಳನ್ನು ಕೇವಲ ನಿರಾಕರಿಸಿದ್ದಾನೆ. ಸಶಸ್ತ್ರಗಳನ್ನು ಹೊಂದಿ ರುವುದನ್ನು ಪ್ರಾಸಿಕ್ಯೂಷನ್, ಸಾಕ್ಷ್ಯಾಧಾರ ಗಳ ಸಮೇತ ಸಾಬೀತುಪಡಿಸಿದೆ’ ಎಂದು ತಿಳಿಸಿದೆ.

ADVERTISEMENT

ಹಿನ್ನೆಲೆ

ಬಳ್ಳಾರಿಯ ಹೊಸಪೇಟೆಯಿಂದ 2007ರ ಜನವರಿ 5ರಂದು ಖಾಸಗಿ ಬಸ್‍ನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಗೊರಗುಂಟೆಪಾಳ್ಯದಲ್ಲಿ ಬಿಲಾಲ್‌ನನ್ನು ಸಿಸಿಬಿ ‍ಪೊಲೀಸರು ಬಂಧಿಸಿದ್ದರು.

ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ 2016 ಅಕ್ಟೋಬರ್ 6ರಂದು ಬಿಲಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.