ADVERTISEMENT

ಬೆಂಗಳೂರು | ಶಿಕ್ಷಣದಲ್ಲಿ ದ್ವಿಭಾಷೆ ನೀತಿ ಜಾರಿಗೊಳ್ಳಲಿ: ಸಾಹಿತಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 16:09 IST
Last Updated 29 ಅಕ್ಟೋಬರ್ 2025, 16:09 IST
ಬೆಂಗಳೂರಿನ ಗಾಂಧಿ ಭವನದಲ್ಲಿ ಮಂಗಳವಾರ ಬನವಾಸಿ ಬಳಗ ಆಯೋಜಿಸಿದ್ದ ತ್ರಿಭಾಷಾನೀತಿ ಸಾಕು ಎರಡು ನುಡಿ ಕಲಿಕೆ ಬೇಕು ವಿಚಾರಸಂಕಿರಣದಲ್ಲಿ ಭಾಗವಹಿಸಿದ ಗಣ್ಯರು ಮನವಿ ಪತ್ರಕ್ಕೆ ಸಹಿ ಹಾಕಿದರು. 
 ಪ್ರಜಾವಾಣಿ ಚಿತ್ರ 
ಬೆಂಗಳೂರಿನ ಗಾಂಧಿ ಭವನದಲ್ಲಿ ಮಂಗಳವಾರ ಬನವಾಸಿ ಬಳಗ ಆಯೋಜಿಸಿದ್ದ ತ್ರಿಭಾಷಾನೀತಿ ಸಾಕು ಎರಡು ನುಡಿ ಕಲಿಕೆ ಬೇಕು ವಿಚಾರಸಂಕಿರಣದಲ್ಲಿ ಭಾಗವಹಿಸಿದ ಗಣ್ಯರು ಮನವಿ ಪತ್ರಕ್ಕೆ ಸಹಿ ಹಾಕಿದರು.   ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ತಮಿಳುನಾಡು ಮಾದರಿಯಲ್ಲೇ ಕರ್ನಾಟಕವೂ ಶಿಕ್ಷಣದಲ್ಲಿ ದ್ವಿಭಾಷಾ ನೀತಿಯನ್ನು 2026–2027ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸುವ ಬದ್ದತೆಯನ್ನು ತೋರಬೇಕು. ಇದಕ್ಕಾಗಿ ಗೋಕಾಕ್‌ ಮಾದರಿಯ ಚಳಿವಳಿಯನ್ನು ಆರಂಭಿಸಬೇಕು’ ಎಂದು ಸಾಹಿತಿಗಳು, ಚಿಂತಕರು ಹೇಳಿದರು.

ಬನವಾಸಿ ಬಳಗವು ನಗರದ ಗಾಂಧಿಭವನದಲ್ಲಿ ತ್ರಿಭಾಷಾನೀತಿ ಸಾಕು: ಎರಡು ನುಡಿ ಕಲಿಕೆ ಬೇಕು ಎನ್ನುವ ‌ಕುರಿತು ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. 

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ‘ತ್ರಿಭಾಷಾ ಸೂತ್ರ ನಮಗೆ ತ್ರಿಶೂಲವಿದ್ದ ಹಾಗೆ ಎಂದು ಕುವೆಂಪು ಅವರು ಅಂದೇ ಎಚ್ಚರಿಸಿದ್ದರು. ನಮ್ಮಲೂ ತಮಿಳುನಾಡಿನಂತೆ ದ್ವಿಭಾಷಾ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರ ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರದ ಹಂಗಿಲ್ಲದೇ ರಾಜ್ಯ ಸರ್ಕಾರವೇ ಸಂಪುಟದಲ್ಲಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಬೇಕು. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಸಚಿವರು, ರಾಜಕೀಯ ನೇತಾರರಿಗೂ ಎಚ್ಚರಿಸಬೇಕು’ ಎಂದು ಹೇಳಿದರು.

ADVERTISEMENT

ಕಾದಂಬರಿಕಾರ ಕುಂ.ವೀರಭದ್ರಪ್ಪ ಮಾತನಾಡಿ, ‘ತಮಿಳುನಾಡಿನಲ್ಲಿ ಕೇಂದ್ರೀಯ ಹಾಗೂ ನವೋದಯ ಶಾಲೆಗಳಿಗೆ ಅವಕಾಶ ನೀಡದೇ ಎರಡೇ ಭಾಷೆಯ ಶಿಕ್ಷಣಕ್ಕೆ ಒತ್ತು ನೀಡಿದೆ. ನಮ್ಮ ನಾಡಿನ ರಾಜಕೀಯ ನಾಯಕರಿಗೆ ಭಾಷಾಭಿಮಾನ ಇಲ್ಲದಿರುವುದರಿಂದ ಇದು ಬೇಡಿಕೆಯಾಗಿಯೇ ಉಳಿದಿದ್ದು, ಗೋಕಾಕ್‌ ಮಾದರಿ ಚಳವಳಿ ರೂಪಿಸಬೇಕಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಅನುದಾನ ಹೆಚ್ಚಾಗಿದ್ದು, ಇದನ್ನೂ ಗಮನಿಸಬೇಕು’ ಎಂದರು.

ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಮಾತನಾಡಿ, ‘ಸರ್ಕಾರಿ ಶಾಲೆಗಳ ಸಮೀಪದಲ್ಲೇ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡುವುದಿಲ್ಲ, ಖಾಸಗಿ ಶಾಲೆಗಳು ರಾಜ್ಯ ಸರ್ಕಾರ ರೂಪಿಸಿದ ಪಠ್ಯವನ್ನೇ ಕಡ್ಡಾಯವಾಗಿ ಬಳಸಬೇಕು ಎನ್ನುವ ಆದೇಶವನ್ನು ಜಾರಿಗೊಳಿಸಿ, ಎರಡು ನುಡಿ ಕಲಿಕೆಗೆ ಒತ್ತು ನೀಡಬೇಕು’ ಎಂದು ಹೇಳಿದರು.

ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ‘ತಮಿಳುನಾಡಿನವರು ಐವತ್ತು ವರ್ಷದ ಹಿಂದೆಯೇ ತಮಿಳು ಭಾಷಾ ಶಿಕ್ಷಣ, ಆಡಳಿತಕ್ಕೆ ಒತ್ತು ನೀಡಿದರು. ಅನಿವಾರ್ಯವಾಗಿ ಇಂಗ್ಲಿಷ್‌ ಅನ್ನು ಆಡಳಿತದಲ್ಲಿ ಸೇರಿಸಿಕೊಂಡರೂ ತಮಿಳು ಬಿಟ್ಟು ಬೇರೆ ಭಾಷೆಗೆ ಅವಕಾಶ ನೀಡಿಲ್ಲ. ಸಿದ್ದರಾಮಯ್ಯ ಅವರು ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಕಚೇರಿಗಳಲ್ಲಿ ಭಾವಚಿತ್ರ ಅಳವಡಿಸುವ ಕ್ರಮ ಕೈಗೊಂಡಿದ್ದು ಇದಕ್ಕೂ ಮಾದರಿಯಾಗಬಹುದು’ ಎಂದು ಹೇಳಿದರು,.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ರಾಜ್ಯ ಶಿಕ್ಷಣ ನೀತಿಯಲ್ಲೇ ಭಾಷಾ ನೀತಿಯೂ ಒಂದು ಭಾಗವೇ ಆಗಿದೆ. ಈಗಾಗಲೇ ವರದಿಯನ್ನು ನೀಡಲಾಗಿದೆ. ದ್ವಿಭಾಷಾ ವ್ಯವಸ್ಥೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು’ ಎಂದು ತಿಳಿಸಿದರು.

ಸಾಹಿತಿ ಗೊರುಚ, ಕಸಾಪ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್‌, ನಟ ‘ಮುಖ್ಯಮಂತ್ರಿ’ ಚಂದ್ರು, ಸಂಗೀತ ನಿರ್ದೇಶಕ ಹಂಸಲೇಖ, ಕರೀಗೌಡ ಬೀಚನಹಳ್ಳಿ, ಹಿ.ಚಿ.ಬೋರಲಿಂಗಯ್ಯ, ಡಾ.ವಸುಂಧರಾ ಭೂಪತಿ, ಕವಿರಾಜ್‌, ಪದ್ಮಿನಿ ನಾಗರಾಜು, ಪ್ರಕಾಶ್ ಮೂರ್ತಿ, ರಾಜಶ್ರೀ, ಬನವಾಸಿ ಬಳಗದ ಅಧ್ಯಕ್ಷ ಜಿ.ಆನಂದ್ ಹಾಜರಿದ್ದರು.

ಸಂಪುಟದಲ್ಲಿ ಚರ್ಚೆ: ಸಿ.ಎಂ ಭರವಸೆ

ಸಭೆಯ ಬಳಿಕ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶಿಕ್ಷಣದಲ್ಲಿ ದ್ವಿ ಭಾಷಾ ನೀತಿ ಜಾರಿಗೆ ಕ್ರಮ ವಹಿಸಬೇಕು. ನವೆಂಬರ್ 1ರಂದು ಇದನ್ನು ಘೋಷಿಸಬೇಕು ಎಂದು ಮನವಿ ಮಾಡಿದರು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವೆ ಎಂದು ಸಿದ್ದರಾಮಯ್ಯ ಅವರು ನಿಯೋಗಕ್ಕೆ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.