ADVERTISEMENT

ಜಾತಿವಾರು ಗಣತಿ | ಬಿಲ್ಲವರು, ಈಡಿಗರು ಎಂದೇ ಬರೆಸಿ: ಬಿ.ಕೆ.ಹರಿಪ್ರಸಾದ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 19:16 IST
Last Updated 10 ಆಗಸ್ಟ್ 2025, 19:16 IST
<div class="paragraphs"><p>ಬೆಂಗಳೂರು ಬಿಲ್ಲವ ಅಸೋಸಿಯೇಷನ್‌ನ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿದರು.</p></div>

ಬೆಂಗಳೂರು ಬಿಲ್ಲವ ಅಸೋಸಿಯೇಷನ್‌ನ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿದರು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ರಾಜ್ಯದ ನಾನಾ ಭಾಗಗಳಲ್ಲಿ ನೆಲಸಿರುವ ಬಿಲ್ಲವರು, ಈಡಿಗರು ಆಯಾ ಭಾಗದಲ್ಲಿರುವಂತೆ ತಮ್ಮ ಜಾತಿಯ ಹೆಸರನ್ನೇ ಜಾತಿವಾರು ಗಣತಿ ವೇಳೆ ಬರೆಸಬೇಕು. ಅಡ್ಡಹೆಸರು ಇಲ್ಲವೇ ಉಪಜಾತಿ ಬರೆಸುವುದು ಬೇಡ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಸಲಹೆ ನೀಡಿದರು.

ADVERTISEMENT

ಬೆಂಗಳೂರಿನ ಅರಮನೆ ಆವರಣ ದಲ್ಲಿ ಭಾನುವಾರ ಆಯೋಜಿಸಿದ್ದ ಬಿಲ್ಲವ ಅಸೋಸಿಯೇಷನ್‌ನ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ , ಉಡುಪಿ, ಕಾಸರಗೋಡು ಭಾಗದಲ್ಲಿ ಬಿಲ್ಲವರು, ಉತ್ತರ ಕನ್ನಡ ಭಾಗದಲ್ಲಿ ನೆಲಸಿರುವ ನಾಮಧಾರಿಗಳು, ಶಿವಮೊಗ್ಗ ಜಿಲ್ಲೆಯಲ್ಲಿರುವ ದೀವರು ಹಾಗೂ ಕರ್ನಾಟಕದ ಇತರೆ ಭಾಗಗಳಲ್ಲಿ ಇರುವ ಈಡಿಗರು ಅದೇ ಹೆಸರನ್ನು ನಮೂದಿಸಬೇಕು. ಇದರಿಂದ ಜಾತಿವಾರು ಜನಸಂಖ್ಯೆ ಬಗ್ಗೆ ನಿಖರ ಮಾಹಿತಿ ದೊರೆಯಲಿದ್ದು ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

‘ಕೇರಳದಲ್ಲಿ 117 ಶಿಕ್ಷಣ ಸಂಸ್ಥೆಗಳನ್ನು ನಾರಾಯಣಗುರುಗಳ ಹೆಸರಿನಲ್ಲಿ ಸ್ಥಾಪಿಸಲಾಗಿದೆ.
ಕರ್ನಾಟಕದಲ್ಲೂ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಐದು ಎಕರೆ ಭೂಮಿ ಕೊಡಬೇಕು. ಒಂದು ಎಕರೆ ಜಮೀನು ಒದಗಿಸಿದರೆ ಬಿಲ್ಲವ ಸಂಘದಿಂದ ಮಹಿಳಾ ಹಾಸ್ಟೆಲ್‌ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.

‘ಕರ್ನಾಟಕದ ನಾನಾ ಭಾಗಗಳಲ್ಲಿ ಸಮುದಾಯದವರನ್ನು ಬೇರೆ ಬೇರೆ ಹೆಸರಲ್ಲಿ ಕರೆಯಲಾಗುತ್ತದೆ. ಸಂಸ್ಕೃತಿಯು ಭಿನ್ನವಾಗಿದೆ. ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡಬೇಕು. ಸಮುದಾಯದ ಯುವಕರು ಕೊಲೆ ಮಾಡಿ ಜೈಲಿಗೆ ಸೇರುವುದು ಇಲ್ಲವೇ ಕೊಲೆಯಾಗುವಂತ ಸನ್ನಿವೇಶಗಳನ್ನು ಸೃಷ್ಟಿಸಿಕೊಳ್ಳಬೇಡಿ. ನಾರಾಯಣ ಗುರುಗಳ ಆದರ್ಶದಂತೆ ಬದುಕು ಕಟ್ಟಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌, ‘ಬಿಲ್ಲವ ಸಮುದಾಯದವರು ಒಂದು ಕಡೆ ಸೇರಿ ಸಂಭ್ರಮದಲ್ಲಿ ತೊಡಗಿರುವುದು ಒಳ್ಳೆಯದು. ಒಗ್ಗಟ್ಟಿನ ಮೂಲಕ ಇತರೆ ಸಮುದಾಯದೊಂದಿಗೆ ಸಮನ್ವಯ ಸಾಧಿಸಬೇಕು’ ಎಂದು ನುಡಿದರು.

ಸೋಲೂರಿನ ಆರ್ಯ ಈಡಿಗ ಸಂಸ್ಥಾನದ ನಾರಾಯಣಗುರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಎಂ.ರೇವಣ್ಣ, ಶಾಸಕರಾದ ವಿ.ಸುನೀಲ್‌ ಕುಮಾರ್‌, ಬೇಳೂರು ಗೋಪಾಲಕೃಷ್ಣ, ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಕೆ.ಹರೀಶ್‌ ಕುಮಾರ್‌, ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಬಿಲ್ಲವ ಅಸೋಸಿಯೇಷನ್‌ ಅಧ್ಯಕ್ಷ ಎಂ.ವೇದಕುಮಾರ್‌, ಪ್ರಧಾನ ಕಾರ್ಯದರ್ಶಿ ಡಿ.ಎನ್‌.ಸಂಪತ್‌ ಕುಮಾರ್‌, ಪದಾಧಿಕಾರಿಗಳು ಇದ್ದರು.

ಸನ್ಮಾನ:

ಸುವರ್ಣ ಮಹೋತ್ಸವ ನೆನಪಿನಲ್ಲಿ ಬೆಂಗಳೂರು ಬಿಲ್ಲವ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ವಸಂತ ಕುಮಾರ್‌ ಬಂಗೇರ, ಯು.ಬಿ.ರವಿರಂಜನ್‌, ವಾಸುದೇವ ಕೋಟ್ಯಾನ್‌, ಎಂ.ಪ್ರಕಾಶ್‌, ಕೆ.ಎಚ್‌.ಆನಂದ್‌, ವಿಜಯಕೃಷ್ಣ ಪಡುಕೋಣೆ, ಲಲಿತಾ ಸುವರ್ಣ, ಭಾಸ್ಕರ ಅಮೀನ್‌, ಗೌರವ ಅಧ್ಯಕ್ಷ ನೆಕ್ಕಿದಪುಣೆ ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ತುಳುನಾಡ ಸಂಸ್ಕೃತಿ ಅನಾವರಣ
ಬೆಂಗಳೂರಿನಲ್ಲಿ ದಶಕಗಳಿಂದ ನೆಲಸಿರುವ ಕರಾವಳಿ ಮೂಲದ ಬಿಲ್ಲವ ಸಮುದಾಯದ ಹಲವರು ಸುವರ್ಣ ಸಂಭ್ರಮದಲ್ಲಿ ಕುಟುಂಬದೊಂದಿಗೆ ಭಾಗಿಯಾಗಿ ಸಂಭ್ರಮಿಸಿದರು. ತುಳುನಾಡಿನ ಸಂಸ್ಕೃತಿ ಬಿಂಬಿಸುವ ಕಲಾ ಪರಿಸರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಊಟೋಪಚಾರ ಸಮುದಾಯ ದವರನ್ನು ಬೆಸೆದವು. ಮಳೆಯ ನಡುವೆಯೂ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.