ಬೆಂಗಳೂರು: ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ ಅವರು, ಜೈವಿಕ ಇಂಧನ ಕಾರ್ಯಯೋಜನೆ ಮತ್ತು ಮಂಡಳಿ ಅಧ್ಯಕ್ಷರಾಗಿ ತಮ್ಮ ಒಂದು ವರ್ಷದ ಕಾರ್ಯಗಳ ವರದಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶನಿವಾರ ಸಲ್ಲಿಸಿದರು.
‘ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಹೊಸ ಜೈವಿಕ ಇಂಧನ ನೀತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಂಡಳಿ ಕಾರ್ಯೋನ್ಮುಖವಾಗಿದೆ’ ಎಂದು ಉಪಮುಖ್ಯಮಂತ್ರಿಗೆ ವಿವರಿಸಿದರು.
‘ಜೈವಿಕ ಇಂಧನ ನೀತಿಗೆ ಸರ್ಕಾರದಿಂದ ಅನುಮೋದನೆ ದೊರೆತು, ಅನುಷ್ಠಾನಗೊಂಡರೆ ಹಾಗೂ ಉತ್ಪಾದನಾ ಘಟಕಗಳಿಗೆ ರಿಯಾಯಿತಿ, ಪ್ರೋತ್ಸಾಹ ಹಾಗೂ ಮೂಲಸೌಕರ್ಯ ಒದಗಿಸಿದರೆ ಮುಂದಿನ ಐದು ವರ್ಷಗಳಲ್ಲಿ ₹ 1 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಬಹುದು’ ಎಂದು ಹೇಳಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿ.ಕೆ.ಶಿವಕುಮಾರ್, ‘ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಎಲ್ಲಾ ಹಂತದಲ್ಲೂ ಸಹಕಾರ ನೀಡಲಿದೆ. ನೂತನ ಜೈವಿಕ ಇಂಧನ ನೀತಿ ಅನುಮೋದನೆಗೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ್, ಸದಸ್ಯರಾದ ದಿವಾಕರ್ ರಾವ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.