ADVERTISEMENT

ಮೆಕ್ಕೆಜೋಳದ ದಿಂಡಿನ ಪುಡಿಯಿಂದ ‘ಜೈವಿಕ ಸಿರಿ’ ಗೊಬ್ಬರ

ಖಲೀಲಅಹ್ಮದ ಶೇಖ
Published 18 ಅಕ್ಟೋಬರ್ 2023, 20:19 IST
Last Updated 18 ಅಕ್ಟೋಬರ್ 2023, 20:19 IST
ಮೆಕ್ಕೆಜೋಳದ ದಿಂಡಿನ ಪುಡಿಯಿಂದ ತಯಾರಿಸಿದ ಜೈವಿಕ ಸಿರಿ ಗೊಬ್ಬರ 
ಮೆಕ್ಕೆಜೋಳದ ದಿಂಡಿನ ಪುಡಿಯಿಂದ ತಯಾರಿಸಿದ ಜೈವಿಕ ಸಿರಿ ಗೊಬ್ಬರ    

ಬೆಂಗಳೂರು: ಗಾಂಧಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಿಂದ ಮೆಕ್ಕೆಜೋಳದ ದಿಂಡಿನ ಪುಡಿಯಿಂದ‌ ‘ಜೈವಿಕ ಸಿರಿ’ ಎಂಬ ಗೊಬ್ಬರವನ್ನು ಅಭಿವೃದ್ಧಿಪಡಿಸಲಾಗಿದೆ.

ವಿಶ್ವ ಬ್ಯಾಂಕ್‌ ಹಾಗೂ ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆಯ (ಎನ್‌ಎಎಚ್‌ಇಪಿ) ಧನ ಸಹಾಯದಿಂದ ‘ವೇಸ್ಟ್‌ ಟು ವೆಲ್ತ್‌’ ಯೋಜನೆ ಅಡಿಯಲ್ಲಿ ಈ ಗೊಬ್ಬರ ತಯಾರಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ದೇಸಿ ಸಮ್ಮೇಳನದಲ್ಲಿ ‘ಜೈವಿಕ ಸಿರಿ’ ಗೊಬ್ಬರ ರೈತರ ಗಮನ ಸೆಳೆಯಿತು. 

‘ರಾಗಿ, ಭತ್ತ, ತೊಗರಿ, ಕಡ್ಲೆ, ಜೋಳ, ಹತ್ತಿ ಸೇರಿದಂತೆ ಅಡಿಕೆ, ತೆಂಗು, ರಬ್ಬರ್, ಶುಂಠಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಜೈವಿಕ ಸಿರಿ ಗೊಬ್ಬರ ನೆರವಾಗಲಿದೆ. ಇದರ ಬಳಕೆಯಿಂದ ರಾಸಾಯನಿಕ ಗೊಬ್ಬರದ ಅವಲಂಬನೆ ಕಡಿಮೆ ಮಾಡಬಹುದು. ಜತೆಗೆ ಶೇ 10 ರಿಂದ 30ರಷ್ಟು ಇಳುವರಿಯೂ ಸುಧಾರಿಸುತ್ತದೆ‘ ಎಂದು ಕೃಷಿ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ಪ್ರಧಾನ ಸಂಶೋಧಕ ಎನ್. ಉಮಾಶಂಕರ್ ಮಾಹಿತಿ ನೀಡಿದರು. 

ADVERTISEMENT

‘ಈ ಗೊಬ್ಬರ, ಭೂಮಿಯಲ್ಲಿ ಬಳಕೆ ಆಗದೇ ಉಳಿದಿರುವ ರಂಜಕ ಮತ್ತು ಪೊಟ್ಯಾಶನ್ನು ಕರಗಿಸಿ ಗಿಡಗಳಿಗೆ ಒದಗಿಸುತ್ತದೆ. ಮಣ್ಣಿನ ತೇವಾಂಶವನ್ನು ಕಾಪಾಡುತ್ತದೆ. ಹನಿ ನೀರಾವರಿ ಪದ್ಧತಿಯ ಮೂಲಕ ಇದನ್ನು ಬೆಳೆಗಳಿಗೆ ಒದಗಿಸಬಹುದು’ ಎಂದು ವಿವರಿಸಿದರು. 

‘ಜೈವಿಕ ಸಿರಿ ಗೊಬ್ಬರ ಬಳಕೆಯಿಂದ ಶೇ 25ರಷ್ಟು ರಾಸಾಯನಿಕ ಗೊಬ್ಬರ ಬಳಕೆ ಕಡಿಮೆಯಾಗಲಿದೆ. ಇದು ಬೀಜಗಳಲ್ಲಿನ ಮೊಳಕೆ ಒಡೆಯುವ ಶಕ್ತಿಯನ್ನು ವೃದ್ಧಿಸುತ್ತದೆ. ಬೆಳೆ ಇಳುವರಿ ಹೆಚ್ಚಳಕ್ಕೆ ನೆರವಾಗುತ್ತದೆ. ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ‘ ಎಂದು ಅವರು ವಿವರಿಸಿದರು.

‘ಮುಂದಿನ ದಿನಗಳಲ್ಲಿ ಜೈವಿಕ ಸಿರಿ ಗೊಬ್ಬರವನ್ನು ಪುಡಿ ಹಾಗೂ ದ್ರವ ರೂಪದಲ್ಲಿ ಮಾರುಕಟ್ಟೆ ಬಿಡುಗಡೆ ಮಾಡಲಾಗುತ್ತದೆ’ ಎಂದರು

ಪುಡಿ ರೂಪದ ಜೈವಿಕ ಸಿರಿ ಬಳಕೆ ವಿಧಾನಗಳು

ಬೀಜೋಪಚಾರ: 10–20 ಗ್ರಾಂ ಜೈವಿಕ ಸಿರಿ ಪುಡಿಯನ್ನು 100 ಮಿ.ಲೀ ಬೆಲ್ಲದ ಪಾಕದೊಂದಿಗೆ ಬೆರೆಸಿ ದ್ರವ ತಯಾರಿಸಿಕೊಂಡು ಸಣ್ಣ ಗಾತ್ರದ ಬೀಜಗಳಿಗೆ ಲೇಪಿಸಿಕೊಳ್ಳಬೇಕು. ಸಂಸ್ಕರಿಸಿದ ಬೀಜಗಳನ್ನು 30 ನಿಮಿಷ ನೆರಳಿನಲ್ಲಿ ಒಣಗಿಸಿಕೊಂಡು 24 ಗಂಟೆಯೊಳಗೆ ಬಿತ್ತನೆ ಮಾಡಬೇಕು. ಸಸ್ಯ ಬೇರುಗಳಿಗೆ: 1ಕೆ.ಜಿ ‘ಜೈವಿಕ ಸಿರಿ‘ ಪುಡಿಯನ್ನು 10 ಲೀಟರ್‌ ನೀರಿಗೆ ಬೆರೆಸಿ ದ್ರಾವಣ ಮಾಡಿಕೊಳ್ಳಬೇಕು. ಇದರಲ್ಲಿ ಪೈರಿನ ಬೇರನ್ನು 30 ನಿಮಿಷ ನೆನೆಸಿ ನಂತರ ನಾಟಿ ಮಾಡಬೇಕು. ನರ್ಸರಿಗಳಲ್ಲಿ 1 ಕೆ.ಜಿ. ಜೈವಿಕ ಸಿರಿ ಗೊಬ್ಬರವನ್ನು 1 ಟನ್‌ ಕೋಕೋಪಿಟ್‌ ಜೊತೆ ಬೆರೆಸಿಕೊಂಡು ಬಳಕೆ ಮಾಡಬಹುದು.

ಮಣ್ಣಿಗೆ ಸೇರಿಸುವ ವಿಧಾನ: ಒಂದು ಎಕರೆಗೆ 4 ರಿಂದ 5 ಕೆ.ಜಿ. ಜೈವಿಕ ಸಿರಿ ಗೊಬ್ಬರವನ್ನು 1 ಟನ್‌ ಕೊಟ್ಟಿಗೆ ಗೊಬ್ಬರ 200 ಕೆ.ಜಿ. ಸಾವಯವ ಗೊಬ್ಬರ 200 ಕೆ.ಜಿ. ಎರೆಹುಳು ಗೊಬ್ಬರದೊಂದಿಗೆ ಬೆರೆಸಿ ಭೂಮಿ ಸಿದ್ಧತೆಯ ವೇಳೆ ಮಣ್ಣಿಗೆ ಸೇರಿಸಬಹುದು ಎಂದು ಉಮಾಶಂಕರ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.