ADVERTISEMENT

ಟೆಲಿಕಾಂ ಬಡಾವಣೆ – ಹಕ್ಕಿಗಳ ಸಾವು

ಮೊಬೈಲ್‌ ಗೋಪುರ ಹೊರಸೂಸುವ ವಿದ್ಯುತ್‌ ಕಾಂತೀಯ ವಿಕಿರಣದಿಂದ ಸಮಸ್ಯೆ?

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 22:09 IST
Last Updated 10 ಮಾರ್ಚ್ 2020, 22:09 IST
ಟೆಲಿಕಾಂ ಬಡಾವಣೆಯ ಉದ್ಯಾನದ ಬಳಿಯ ಮೊಬೈಲ್‌ ಗೋಪುರ ಹಾಗೂ ಅದರ ಬಳಿ ಸತ್ತು ಬಿದ್ದಿರುವ ಕೊಕ್ಕರೆ
ಟೆಲಿಕಾಂ ಬಡಾವಣೆಯ ಉದ್ಯಾನದ ಬಳಿಯ ಮೊಬೈಲ್‌ ಗೋಪುರ ಹಾಗೂ ಅದರ ಬಳಿ ಸತ್ತು ಬಿದ್ದಿರುವ ಕೊಕ್ಕರೆ   

ಬೆಂಗಳೂರು: ನಗರದ ಕೆಂಗೇರಿ ವಾರ್ಡ್‌ನ ಟೆಲಿಕಾಂ ಬಡಾವಣೆಯಲ್ಲಿ ಎರಡು ವಾರದಲ್ಲಿ ವಿವಿಧ ಜಾತಿಗಳ 10ಕ್ಕೂ ಹೆಚ್ಚು ಹಕ್ಕಿಗಳು ಸತ್ತಿವೆ. ಈ ಪ್ರದೇಶದಲ್ಲಿ ಮೊಬೈಲ್‌ ಗೋಪುರ ಕಾರ್ಯಾಚರಣೆ ಆರಂಭಿಸಿದ ಬಳಿಕವೇ ಪಕ್ಷಿಗಳು ವಿಚಿತ್ರವಾಗಿ ವರ್ತಿಸಲಾರಂಭಿಸಿವೆ. ಈ ವೈ–ಫೈ ಗೋಪುರವು ನಿಗದಿತ ಮಿತಿಗಿಂತ ಹೆಚ್ಚು ವಿದ್ಯುತ್‌ ಕಾಂತೀಯ ವಿಕಿರಣ ಹೊರಸೂಸುತ್ತಿರುವುದರಿಂದಲೇ ಈ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದಾರೆ.

ಮೊಬೈಲ್‌ ಗೋಪುರದಿಂದ ಹೊರಹೊಮ್ಮುವ ವಿದ್ಯುತ್‌ ಕಾಂತೀಯ ವಿಕಿರಣ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆತಂಕ ತೋಡಿಕೊಂಡಿದ್ದಾರೆ.

‘ಟೆಲಿಕಾಂ ಬಡಾವಣೆಯ ಬಾಲಗಂಗಾಧರನಾಥ ಸ್ವಾಮೀಜಿ ಉದ್ಯಾನದಲ್ಲಿ ಎರಡು ವರ್ಷಗಳ ಹಿಂದೆ ಉಚಿತವಾಗಿ ವೈ–ಫೈ ಸೇವೆ ನೀಡುವ ಸಲುವಾಗಿ ಈ ಗೋಪುರವನ್ನು ಅಳವಡಿಸಿದ್ದರು. ಆಗಲೇ ಸ್ಥಳೀಯರೆಲ್ಲ ಸೇರಿ ವಿರೋಧಿಸಿದ್ದೆವು. ಈ ಗೋಪುರ ಮೂರು ತಿಂಗಳಿಂದ ಈಚೆಗೆ ಕೆಲಸ ನಿರ್ವಹಣೆ ಆರಂಭಿಸಿದೆ. ಆ ಬಳಿಕ ಅದರಿಂದ ವಿಚಿತ್ರ ಸದ್ದು ಹೊರಹೊಮ್ಮುತ್ತಿದೆ. ಹಕ್ಕಿಗಳ ವರ್ತನೆ ಬದಲಾಗಿದ್ದು, ಸಾಯುತ್ತಿವೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಬೆಳವಣಿಗೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೊಬೈಲ್‌ ಗೋಪುರಗಳು ಹಾಗೂ ವೈ–ಫೈ ಗೋಪುರಗಳು ಹೊರಸೂಸುವ ವಿಕಿರಣ ನಿಗದಿತ ಮಿತಿಯ ಒಳಗೆ ಇವೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಸದ್ಯಕ್ಕಂತೂ ಬಿಬಿಎಂಪಿ ಬಳಿ ಇಲ್ಲ’ ಎಂದು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಮೊಬೈಲ್‌ ಗೋಪುರದ ಬಳಿ ಹಕ್ಕಿಗಳು ಈ ರೀತಿ ಸತ್ತ ಪ್ರಕರಣನಗರದಲ್ಲಿ ಇದುವರೆಗೆ ಕಂಡು ಬಂದಿಲ್ಲ. ಸ್ಥಳೀಯರು ನೀಡಿರುವ ಮಾಹಿತಿ ಗಮನಿಸಿದರೆ ಇದಕ್ಕೆ ಮೊಬೈಲ್‌ ಗೋಪುರ ಕಾರಣವಿರಲೂ ಬಹುದು. ಅಥವಾ ಬೇರೆ ಕಾರಣಗಳೂ ಇರಬಹುದು. ಈ ಕುರಿತು ಅಧ್ಯಯನ ನಡೆಸದೆ ಖಚಿತವಾಗಿ ಹೇಳುವುದು ಕಷ್ಟ’ ಎಂದು ನಗರ ಜಿಲ್ಲೆಯ ಗೌರವ ವನ್ಯಜೀವಿ ವಾರ್ಡನ್‌ ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಯಾಚರಣೆ ಸ್ಥಗಿತಗೊಳಿಸಿ ಪರೀಕ್ಷಿಸಿ’
‘ಹಕ್ಕಿಗಳ ಸಾವಿಗೆ ನಿಜಕ್ಕೂ ಮೊಬೈಲ್‌ ಗೋಪುರ ಹೊರಸೂಸುವ ವಿದ್ಯುತ್‌ ಕಾಂತೀಯ ವಿಕಿರಣವೇ ಕಾರಣವೋ ಅಲ್ಲವೋ ಎಂಬುದನ್ನು ಪರಿಶೀಲಿಸುವುದು ಕಷ್ಟವೇನಲ್ಲ. ನಾಲ್ಕೈದು ದಿನಗಳ ಮಟ್ಟಿಗೆ ಈ ಗೋಪುರದ ಕಾರ್ಯಾಚರಣೆ ನಿಲ್ಲಿಸಿ ವಿದ್ಯುತ್‌ ಕಾಂತೀಯ ವಿಕಿರಣ ಹೊರಸೂಸದಂತೆ ತಡೆಯಬೇಕು. ಆಗಲೂ ಹಕ್ಕಿಗಳು ಸತ್ತರೆ ಅವುಗಳ ಸಾವಿಗೆ ಬೇರೆಯೇ ಕಾರಣಗಳಿರುವ ಸಾಧ್ಯತೆ ಹೆಚ್ಚು’ ಎಂದು ಟೆಲಿಕಾಂ ಕ್ಷೇತ್ರದ ತಜ್ಞರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊಬೈಲ್‌ ಗೋಪುರಗಳು ಹೊರಸೂಸುವ ವಿಕಿರಣದಿಂದ ಹಕ್ಕಿಗಳು ಏಕಾಏಕಿ ಸಾಯುವುದಿಲ್ಲ. ದೀರ್ಘ ಸಮಯ ಇಂತಹ ವಿಕಿರಣಕ್ಕೆ ಒಡ್ಡಿಕೊಂಡರೆ ಪಕ್ಷಿಗಳಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಗೋಪುರದಿಂದ ಹೊರಹೊಮ್ಮುವ ವಿಕಿರಣದ ಪ್ರಮಾಣ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ನಿಗದಿಪಡಿಸಿದ ಮಿತಿಯ ಒಳಗೇ ಇದ್ದರೆ, ಹಕ್ಕಿಗಳಿಗಾಗಲೀ, ಮನುಷ್ಯರಿಗಾಗಲೀ ಯಾವುದೇ ಅಪಾಯ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ದೂರು ನೀಡಿದರೆ ಟೆಲಿಕಾಂ ಇಲಾಖೆಯ ಅಧಿಕಾರಿ ಗಳೇ ಸ್ಥಳಕ್ಕೆ ಬಂದು ಗೋಪುರದಿಂದ ಹೊರಹೊಮ್ಮುವ ವಿಕಿರಣದ ಪ್ರಮಾಣವನ್ನು ಪರೀಕ್ಷಿಸುತ್ತಾರೆ, ಕಂಪನಿ ನಿಯಮ ಉಲ್ಲಂಘಿಸಿದ್ದರೆ, ಕ್ರಮ ಕೈಗೊಳ್ಳುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.