ADVERTISEMENT

‘ಟೆಲಿಗ್ರಾಂ’ನಲ್ಲಿ ‘ಬಿಟ್‌ ಕಾಯಿನ್‌’ ಗ್ರೂಪ್; ₹ 10 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 19:50 IST
Last Updated 11 ಜನವರಿ 2022, 19:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಟೆಲಿಗ್ರಾಂ ಆ್ಯಪ್‌ನಲ್ಲಿ ‘ಬಿಟ್ ಕಾಯಿನ್’ ವ್ಯವಹಾರದ ಬಳಗ ರಚಿಸಿ ನಗರದ ನಿವಾಸಿಯೊಬ್ಬರಿಂದ ಹಣ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜೆ.ಪಿ. ನಗರದಲ್ಲಿ ವಾಸವಿರುವ 25 ವರ್ಷದ ನಿವಾಸಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಠಾಣೆ ಮೂಲಗಳು ಹೇಳಿವೆ.

‘ದೂರುದಾರ ಟೆಲಿಗ್ರಾಂ ಆ್ಯಪ್‌ ಬಳಸುತ್ತಿದ್ದಾರೆ. ಅವರ ಮೊಬೈಲ್ ಸಂಖ್ಯೆಯನ್ನು ಸೈಬರ್ ವಂಚಕರು, ಟೆಲಿಗ್ರಾಂ ಆ್ಯಪ್‌ನ ಬಳಗಕ್ಕೆ ಸೇರಿಸಿದ್ದರು. ಬಿಟ್‌ ಕಾಯಿನ್ ರೂಪದಲ್ಲಿ ಹಣ ಹೂಡಿಕೆ ಮಾಡಿದರೆ, ಕಡಿಮೆ ಸಮಯದಲ್ಲಿ ಲಕ್ಷ ಲಕ್ಷ ರೂಪಾಯಿ ಗಳಿಸಬಹುದೆಂದು ಸಂದೇಶ ಕಳುಹಿಸಿದ್ದರು.’

ADVERTISEMENT

‘ಆರೋಪಿಗಳ ಸಂದೇಶ ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 10.17 ಲಕ್ಷ ಹೂಡಿಕೆ ಮಾಡಿದ್ದರು. ಅದಾದ ನಂತರ ದೂರುದಾರರಿಗೆ ಯಾವುದೇ ಲಾಭ ಬಂದಿಲ್ಲ. ಈ ಬಗ್ಗೆ ವಿಚಾರಿಸಿದಾಗ ಗ್ರೂಪ್ ಅಡ್ಮಿನ್‌ ಕಡೆಯಿಂದಲೂ ಪ್ರತಿಕ್ರಿಯೆ ಸಿಕ್ಕಿಲ್ಲ. ವಂಚನೆ ಗಮನಕ್ಕೆ ಬರುತ್ತಿದ್ದಂತೆ ದೂರುದಾರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

‘ಬಿಟ್ ಕಾಯಿನ್ ಹೂಡಿಕೆ ವ್ಯವಹಾರದ ನೆಪದಲ್ಲಿ ಜನರನ್ನು ವಂಚಿಸುತ್ತಿರುವ ಜಾಲ ಸಕ್ರಿಯವಾಗಿದೆ. ಈ ಬಗ್ಗೆ ಜನರು ಜಾಗೃತಿಯಿಂದ ಇರಬೇಕು. ಬಿಟ್ ಕಾಯಿನ್ ವ್ಯವಹಾರ ಹಾಗೂ ಅದಕ್ಕೆ ಸಂಬಂಧಪಟ್ಟ ಸಂದೇಶಗಳು ಬಂದರೆ ಪೊಲೀಸರ ಗಮನಕ್ಕೆ ತರಬೇಕು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.