ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಡಿದ್ದ ಭಾಷಣದ ತುಣುಕನ್ನು ಸಚಿವ ಪ್ರಿಯಾಂಕ್ ಖರ್ಗೆ ತಿರುಚಿ, ಕನ್ನಡಿಗರಲ್ಲಿ ಪ್ರಧಾನಿ ವಿರುದ್ಧ ದ್ವೇಷ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮೂಲಕ ಆಯೋಗಕ್ಕೆ ಸೋಮವಾರ ದೂರು ಸಲ್ಲಿಸಿರುವ ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಯಶವಂತ್ ಎಂ. ಮತ್ತು ಬೆಂಗಳೂರು ಜಿಲ್ಲಾ ಘಟಕದ ಸಹ ಸಂಚಾಲಕ ಶಿವಕುಮಾರ್ ಯಾದವ್, ಸಚಿವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಪ್ರಿಯಾಂಕ್ ಅವರ ‘ಎಕ್ಸ್’ ಖಾತೆಯ ಪೋಸ್ಟ್ ವಿವರವನ್ನು ದೂರಿನಲ್ಲಿ ಲಗತ್ತಿಸಿದ್ದು, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ರೈತರಿಗೆ ರಾಜ್ಯ ಸರ್ಕಾರವೂ ತಲಾ ₹4,000 ನೆರವು ನೀಡುತ್ತಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ನಿಲ್ಲಿಸಿದೆ. ಇವರು ಮಾಡಿರುವ ಪಾಪಕ್ಕೆ ಜನರು ಸೂಕ್ತ ಉತ್ತರ ನೀಡಬೇಕು’ ಎಂದು ಪ್ರಧಾನಿ ಹೇಳಿದ್ದರು. ಅದನ್ನು ಕತ್ತರಿಸಿ, ‘ಕನ್ನಡಿಗರು ಪಾಪ ಮಾಡಿದ್ದಾರೆ’ ಎಂದು ಪ್ರಧಾನಿ ಹೇಳಿರುವುದಾಗಿ ತಿರುಚಿದ್ದಾರೆ’ ಎಂದು ದೂರಿದೆ.
ಕನ್ನಡಿಗರಲ್ಲಿ ಪ್ರಧಾನಿ ವಿರುದ್ಧ ದ್ವೇಷ ಭಾವನೆ ಬರುವಂತೆ ಪ್ರಿಯಾಂಕ್ ಸಂದೇಶ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು ಸಚಿವರನ್ನು ಚುನಾವಣಾ ಪ್ರಚಾರದಿಂದ ನಿರ್ಬಂಧಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.