ADVERTISEMENT

ಬಿಜೆಪಿ, ಕಾಂಗ್ರೆಸ್‌ನಿಂದ ಹಣ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 20:10 IST
Last Updated 18 ಏಪ್ರಿಲ್ 2019, 20:10 IST
ಕೆ.ಆರ್.ಪುರದಲ್ಲಿ ಮತದಾರರೊಬ್ಬರಿಗೆ ಹಣ ನೀಡುತ್ತಿರುವ ಕಾರ್ಯಕರ್ತ‌
ಕೆ.ಆರ್.ಪುರದಲ್ಲಿ ಮತದಾರರೊಬ್ಬರಿಗೆ ಹಣ ನೀಡುತ್ತಿರುವ ಕಾರ್ಯಕರ್ತ‌   

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್. ಪುರದಲ್ಲಿರುವ ನಾರಾಯಣ ಇ ಟೆಕ್ನೋ ಸ್ಕೂಲ್ ಬಳಿಯ ಮತಗಟ್ಟೆಯೊಂದರಲ್ಲಿ ಮತದಾರರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚುತ್ತಿದ್ದ ದೃಶ್ಯ ಕಂಡು ಬಂತು.

ಮತದಾರರ ವಯಸ್ಸು ಆಧರಿಸಿ ಬಿಜೆಪಿಯವರು ₹10ರಿಂದ ₹50ರವರೆಗೆ ಹಣ ಹಂಚುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಕಾರ್ಯಕರ್ತರನ್ನು ಪ್ರಶ್ನಿಸಿದಾಗ ‘ಮತದಾರರಿಗೆ ಕಾಫಿ, ಟೀ ಮತ್ತು ನೀರಿನ ಬಾಟಲಿ ಖರೀದಿಸಲು ಈ ಹಣ ನೀಡಲಾಗಿದೆ’ ಎಂದು ಸಮರ್ಥನೆ ನೀಡಿದರು. ಕಾಂಗ್ರೆಸ್‌ ಕಾರ್ಯಕರ್ತರು ₹100ರಿಂದ ₹150 ವಿತರಿಸಿದರು. ‘ನಮಗೆ ಬೆಂಬಲ ನೀಡಿದವರಿಗೆ ಈ ರೀತಿ ಧನ್ಯವಾದ ಸಲ್ಲಿಸಲಾಗುತ್ತಿದೆ ಅಷ್ಟೆ’ ಎಂದು ಹೇಳಿದರು.

ಕೆ.ಆರ್.ಪುರದ ಚಿಕ್ಕಬಾಸಂತಪುರದ ಸರ್ಕಾರಿ ಶಾಲೆ ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚಿಕೆ ಮಾಡುತ್ತಿದ್ದರು. ಅವರ ಹತ್ತಿರಕ್ಕೆ ಮಾಧ್ಯಮ ಪ್ರತಿನಿಧಿಗಳು ಹೋಗುತ್ತಿದ್ದ ವೇಳೆಗೆ ಕಾರ್ಯಕರ್ತರು ಅಲ್ಲಿಂದ ಕಾಲ್ಕಿತ್ತರು. ಮತಗಟ್ಟೆಯ ಕೆಲವೇ ಮೀಟರ್‌ಗಳ ದೂರದಲ್ಲಿ ಹಣ ಹಂಚಿಕೆ ನಡೆಯುತ್ತಿತ್ತು. ಸಮೀಪದಲ್ಲೇ ಇದ್ದ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ.

ADVERTISEMENT

ಮತ ಹಾಕಿದವರಿಗೆ ಗಿಫ್ಟ್‌: ಮತ ಚಲಾಯಿಸಿದ ಬಳಿಕಶಾಯಿ ಇರುವ ತೋರು ಬೆರಳನ್ನು ಪ್ರದರ್ಶಿಸಿದ ಎಲ್ಲಾ ಮತದಾರರಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಾಲಾಜಿ ಪೆಟ್ರೋಲ್ ಬಂಕ್‌ ಸಿಬ್ಬಂದಿ ಉಚಿತ ಸ್ಟೀಲ್‌ ತಟ್ಟೆ ಸಹಿತ ತಿನಿಸು ವಿತರಿಸಿದರು.

ಯಾವುದೇ ಪಕ್ಷ, ವಯಸ್ಸು, ಜಾತಿ ತಾರತಮ್ಯ ಇಲ್ಲದೆ ಎಲ್ಲರಿಗೂ ಉಡುಗೊರೆ ನೀಡಲಾಯಿತು.

ಯಾವ ಪಕ್ಷದವರ ಕಡೆಯಿಂದ ಈ ಗಿಫ್ಟ್ ವಿತರಿಸಲಾಗುತ್ತಿದೆ ಎಂದು ಪ್ರಶ್ನಿಸಿದಾಗ, ‘ಇದು ಬಂಕ್ ಆಡಳಿತ ಮಂಡಳಿಯ ತೀರ್ಮಾನ. ಮತದಾನಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಉಡುಗೊರೆ ನೀಡಲಾಗುತ್ತಿದೆ’ ಎಂದರು. ಕುಟುಂಬದಲ್ಲಿ ಮತದಾನದ ಹಕ್ಕು ಹೊಂದಿದವರ ಸಂಖ್ಯೆ, ಸಂಪರ್ಕ ಸಂಖ್ಯೆ ಬರೆಸಿ, ಸಹಿ ಹಾಕಿಸಿಕೊಂಡು ಈ ಗಿಫ್ಟ್ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.