ADVERTISEMENT

ಮಾಜಿ ಸದಸ್ಯ ಆತ್ಮಹತ್ಯೆ; ಎಂಟು ಮಂದಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 19:30 IST
Last Updated 19 ನವೆಂಬರ್ 2021, 19:30 IST
ಎಂ.ಬಿ. ಶಿವಪ್ಪ
ಎಂ.ಬಿ. ಶಿವಪ್ಪ   

ಬೆಂಗಳೂರು: ಪಾಲಿಕೆಯ ಮಾಜಿ ಸದಸ್ಯರೂ ಆಗಿದ್ದ ಬಿಜೆ‍ಪಿ ಮುಖಂಡ ಎಂ.ಬಿ. ಶಿವಪ್ಪ (58) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ, ಅವರ ಪತ್ನಿಯು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

'ಅತ್ತಿಗು‍ಪ್ಪೆಯ ಬಿಸಿಸಿ ಲೇಔಟ್‌ನಲ್ಲಿರುವ ಮನೆಯಲ್ಲಿ ಶಿವಪ್ಪ ಅವರು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಪತಿ ಆತ್ಮಹತ್ಯೆಗೆ ಎಂಟು ಮಂದಿ ಪ್ರಚೋದನೆ ನೀಡಿದ್ದಾರೆ’ ಎಂದು ಆರೋಪಿಸಿ ಪತ್ನಿ ದೂರು ನೀಡಿದ್ದು, ಅದರನ್ವಯ ಕಾನೂನು ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳಾದ ವಿ. ಧನಂಜಯಗೌಡ, ಬಿ. ಅರುಣ್‌ಕುಮಾರ್, ಅಶೋಕ ಕುಮಾರ್, ಸುಮನ್ ಸೇನಾ ಕೋಟ್ಯಾನ್, ವೆಂಕಟ ರಮಣ ರೆಡ್ಡಿ, ಕಾಶಿನಾಥ್, ಮನೀಸ್ ಚಂದಕ್, ಗೋವಿಂದರಾಜು ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಅವರೆಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದೂ ತಿಳಿಸಿವೆ.

ADVERTISEMENT

ವ್ಯವಹಾರದಲ್ಲಿ ಮೋಸ, ಬೆದರಿಕೆ: ‘ಶಿವಪ್ಪ ಅವರು 2005ರಲ್ಲಿ ಅತ್ತಿಗುಪ್ಪೆ ವಾರ್ಡ್‌ನಿಂದ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಇತ್ತೀಚೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಅವರ ಆತ್ಮಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಿಯಲ್ ಎಸ್ಟೇಟ್‌ನಲ್ಲಿ ಹಣ ಹೂಡಿಕೆ ಮಾಡುವಂತೆ ಆರೋಪಿಗಳು ಹೇಳಿದ್ದರು. ಅದನ್ನು ಶಿವಪ್ಪ ನಂಬಿದ್ದರು. ಅದನ್ನು ಬಂಡವಾಳ ಮಾಡಿಕೊಂಡ ಆರೋಪಿಗಳು, ಶಿವಪ್ಪ ಅವರ ಆಸ್ತಿಯನ್ನು ಮೋಸದಿಂದ ತಮ್ಮದಾಗಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಶಿವಪ್ಪ ಹಾಗೂ ಅವರ ಮಗನ ವಿರುದ್ಧವೇ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದ್ದು, ಈ ಸಂಗತಿ ದೂರಿನಲ್ಲಿದೆ’ ಎಂದೂ ಮೂಲಗಳು ವಿವರಿಸಿವೆ.

‘₹ 4 ಕೋಟಿ ನೀಡುವಂತೆ ಬೇಡಿಕೆ ಇರಿಸಿದ್ದ ಆರೋಪಿಗಳು, ಹಣ ಕೊಡದಿದ್ದರೆ ಕುಟುಂಬದ ಮರ್ಯಾದೆ ತೆಗೆಯುವುದಾಗಿ ಹಾಗೂ ಮಗನನ್ನು ಜೀವಂತ ಬಿಡುವುದಿಲ್ಲವೆಂದು ಬೆದರಿಸಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಂತೆ ಶಿವಪ್ಪ ಅವರಿಗೆ ಪ್ರಚೋದನೆ ನೀಡಿದ್ದರೆಂಬ ವಿಷಯವನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.