ADVERTISEMENT

ಬೆಂಗಳೂರು | ಹೈಕೋರ್ಟ್‌ ಆದೇಶ ಉಲ್ಲಂಘನೆ: ಬಿಜೆಪಿಯ 11 ಮುಖಂಡರಿಗೆ ನೋಟಿಸ್‌ ಜಾರಿ

ಗುಂಡಿ ಮುಚ್ಚಲು ಆಗ್ರಹಿಸಿ ಪ್ರತಿಭಟನೆ ವೇಳೆ ಸುಗಮ ಸಂಚಾರಕ್ಕೆ ಅಡಚಣೆ ಆರೋಪ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 14:02 IST
Last Updated 26 ಸೆಪ್ಟೆಂಬರ್ 2025, 14:02 IST
   

ಬೆಂಗಳೂರು: ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ, ಬಿಜೆಪಿ ಮುಖಂಡರು ನಡೆಸಿದ್ದ ಪ್ರತಿಭಟನೆ ವೇಳೆ ಹೈಕೋರ್ಟ್‌ ಆದೇಶ ಉಲ್ಲಂಘಿಸಿದ ಆರೋಪದ ಅಡಿ 11 ಮಂದಿಗೆ ಗೋವಿಂದರಾಜನಗರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. 

ವಿಜಯನಗರದ ಉಮೇಶ್‌ ಶೆಟ್ಟಿ, ರಂಗನಾಥಪುರದ ಮಂಜುನಾಥ್‌, ಬಿಡಿಎ ಲೇಔಟ್‌ ನಿವಾಸಿ ಗಂಗಮ್ಮ, ದಾಸರಹಳ್ಳಿಯ ಹೇಮಲತಾ, ನಾಯಂಡಹಳ್ಳಿಯ ಪಲ್ಲವಿ, ಅಗ್ರಹಾರ ದಾಸರಹಳ್ಳಿಯ ಲಕ್ಷ್ಮಿ, ಮಂಗಳಾ, ಶಾರದಾ, ಸುರೇಶ್, ಶಕ್ತಿವೀರ್ ಸೇರಿ 11 ಮಂದಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

‘ಈ ಪ್ರಕರಣದಲ್ಲಿ ನೀವುಗಳು ಆರೋಪಿಗಳಾಗಿದ್ದು, ವಿಚಾರಣೆಗೆ ಒಳಪಡಿಸಲು ಪೂರಕ ಕಾರಣಗಳಿವೆ. ನೋಟಿಸ್ ತಲುಪಿದ ಮೂರು ದಿನಗಳ ಒಳಗಾಗಿ ತನಿಖಾಧಿಕಾರಿಯ ಎದುರು ವಿಚಾರಣೆಗೆ ಹಾಜರಾಗಬೇಕು’ ಎಂದು ಗೋವಿಂದರಾಜನಗರ ಠಾಣೆಯ ಪೊಲೀಸರು ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

ADVERTISEMENT

ನೋಟಿಸ್‌ನಲ್ಲಿ ಏನಿದೆ?:

‘ವಿಜಯನಗರದ ಎಂಸಿ ಲೇಔಟ್‌ನ ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಬಿಜೆಪಿ ಕಚೇರಿ ಎದುರು ಬಿಜೆಪಿ ಪಕ್ಷದ ಉಮೇಶ್ ಶೆಟ್ಟಿ ನೇತೃತ್ವದಲ್ಲಿ 20ರಿಂದ 25 ಮಂದಿ ಗುಂಪು ಸೇರಿಕೊಂಡು ಪ್ರತಿಭಟನೆ ನಡೆಸಿದ್ದರು. ಆ ಸ್ಥಳದಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇಲ್ಲ. ಯಾವುದೇ ಪ್ರತಿಭಟನೆಯನ್ನು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಬೇಕು ಎಂದು ಹೈಕೋರ್ಟ್‌ ಆದೇಶವಿದೆ. ಆದೇಶದ ಪ್ರತಿಯನ್ನೂ ಪ್ರತಿಭಟನಕಾರರಿಗೆ ತೋರಿಸಲಾಗಿತ್ತು. ಆದರೂ ಪ್ರತಿಭಟನೆ ನಡೆಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಲಾಗಿದೆ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.