
ಬುಧವಾರ ನಗರದ ಹೊರ ವರ್ತುಲ ರಸ್ತೆಯ ಫೋರ್‌ಮೆನ್ ತರಬೇತಿ ಸಂಸ್ಥೆ (ಎಫ್‌ಟಿಐ) ವೃತ್ತದ ಬಳಿ ಬಿಜೆಪಿ ವತಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿ ಇದ್ದ ಸ್ಥಳಗಳನ್ನು ಗುರುತಿಸಿ ಬಿಜೆಪಿ ಶಾಸಕರು ಹಾಗೂ ಮುಖಂಡರು ಬುಧವಾರ ಅಲ್ಲಿಯೇ ಪ್ರತಿಭಟನೆ ನಡೆಸಿದರು. ಅಲ್ಲದೆ ಜಲ್ಲಿಕಲ್ಲು, ಸಿಮೆಂಟ್ ಮಿಶ್ರಣದಿಂದ ಗುಂಡಿಗಳನ್ನು ಮುಚ್ಚಿ ಆಕ್ರೋಶ ಹೊರ ಹಾಕಿದರು.
‘ರಸ್ತೆ ಸರಿಪಡಿಸಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ‘, ‘ಸಿದ್ದರಾಮಯ್ಯ ಸರ್ಕಾರ ಬೆಂಗಳೂರು ಜನತೆಗೆ ಗುಂಡಿ ಭಾಗ್ಯ ಕಲ್ಪಿಸಿದೆ‘ ಎನ್ನುವ ಘೋಷಣೆಗಳ ಮೂಲಕ ನಗರದ 15ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯವರು ಪ್ರತಿಭಟನೆ ನಡೆಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ನೇತೃತ್ವದಲ್ಲಿ ಬಸವನಗುಡಿ ಹಾಗೂ ಪದ್ಮನಾಭನಗರ ಕ್ಷೇತ್ರಕ್ಕೆ ಹೊಂದಿಕೊಂಡ ಕಾಮಾಕ್ಯ ಚಿತ್ರಮಂದಿರ ಬಳಿ ಹೊರ ವರ್ತುಲ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
‘ಬೆಂಗಳೂರಿನಲ್ಲಿ ಯಾವುದೇ ಬಡಾವಣೆಗೆ ಹೋದರೂ ಗುಂಡಿ ಬಿದ್ದ ರಸ್ತೆಗಳೇ ಮೃತ್ಯುಕೂಪಗಳಾಗಿ ಮಾರ್ಪಟ್ಟಿವೆ. ಸರ್ಕಾರ ಗುಂಡಿ ಮುಚ್ಚುವುದಾಗಿ ಹೇಳಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಜನರೇ ಗುಂಡಿ ಮುಚ್ಚುವಂತೆ ಕರೆ ನೀಡುವ ಸನ್ನಿವೇಶ ಸೃಷ್ಟಿಯಾಗಬಹುದು' ಎಂದು ಅಶೋಕ ಹೇಳಿದರು.
ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್, ಬಿಜೆಪಿ ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿಗೌಡ ಅವರ ನೇತೃತ್ವದಲ್ಲಿ ಗಾಂಧಿನಗರ ಕ್ಷೇತ್ರದಲ್ಲಿ ‘ಗುಂಡಿಗಳ ಊರು ಬೆಂಗಳೂರು‘ ಎನ್ನುವ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಯಿತು.
ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸದ ಎದುರು ಗುಂಡಿಗಳನ್ನು ಮುಚ್ಚಿ ಪ್ರತಿಭಟಿಸಿದರು.
ಚಿಕ್ಕಪೇಟೆಯಲ್ಲಿ ಶಾಸಕರಾದ ಉದಯ್ ಗರುಡಾಚಾರ್, ರಾಮಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ‘ಸರ್ಕಾರ ಗುಂಡಿ ಮುಚ್ಚಲು ₹1180 ಕೋಟಿ ಬಿಡುಗಡೆ ಮಾಡಿರುವುದಾಗಿ ಹೇಳಿದ್ದರೂ ಆ ಹಣ ಎಲ್ಲಿ ಹೋಯಿತು ಎನ್ನುವುದು ತಿಳಿಯುತ್ತಿಲ್ಲ. ಪ್ರತಿ ಶಾಸಕರ ಕ್ಷೇತ್ರಕ್ಕೆ ಈವರೆಗೂ ₹25 ಕೋಟಿ ಬಿಡುಗಡೆಯಾಗಿಲ್ಲ’ ಎಂದು ರಾಮಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಯಲಹಂಕ ನ್ಯೂಟೌನ್‌ನಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್, ಕೆ.ಆರ್.ಪುರ ಕ್ಷೇತ್ರದ ಬಸವನಪುರದಲ್ಲಿ ಶಾಸಕ ಬೈರತಿ ಬಸವರಾಜು ನೇತೃತ್ವದಲ್ಲಿ, ಯಶವಂತಪುರ ಕ್ಷೇತ್ರದ ಹೆರೋಹಳ್ಳಿ, ಪುಲಕೇಶಿನಗರದ ರಾಬರ್ಟ್‌ಟೌನ್, ವಿಜಯನಗರ, ಶಿವಾಜಿನಗರ, ಆರ್.ಆರ್.ನಗರ ಕ್ಷೇತ್ರದಲ್ಲೂ ಪ್ರತಿಭಟನೆಗಳು ನಡೆದವು. ಶಾಂತಿನಗರ ಕ್ಷೇತ್ರದ ದೊಮ್ಮಲೂರಿನಲ್ಲಿ ಮಾಜಿ ಮೇಯರ್ ಗೌತಮ್, ನೀಲಸಂದ್ರದಲ್ಲಿ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗುಂಡಿ ಮುಚ್ಚಿ ಎಂದರೆ ಪ್ರಧಾನಿ ಮೋದಿ ಅವರ ಮನೆಯ ರಸ್ತೆ ಉದಾಹರಣೆ ನೀಡುವ ಡಿ.ಕೆ. ಶಿವಕುಮಾರ್ ಟ್ರಂಪ್ ಅವರ ಮನೆಯ ರಸ್ತೆಯನ್ನೂ ನೋಡಿಕೊಂಡು ಬರಲಿಆರ್.ಅಶೋಕ ವಿರೋಧ ಪಕ್ಷದ ನಾಯಕ
ಬಿಜೆಪಿ ಪ್ರಮುಖರ ಬಂಧನ ಬಿಡುಗಡೆ
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸುವಾಗ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಮತ್ತಿತರರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು. ರಸ್ತೆ ಗುಂಡಿ ಮುಚ್ಚಿ ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸುವಾಗ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸದಂತೆ ಪೊಲೀಸರು ಮನವಿ ಮಾಡಿದರು. ಪ್ರತಿಭಟನೆ ಮುಂದುವರಿಸಿದಾಗ 25 ಮಂದಿಯನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದರು.
‘ನಾಲ್ಕೈದು ಕಡೆ ಗುಂಡಿ ಮುಚ್ಚಿದ್ದೇವೆ’
ನಗರದ ಮಹಾಲಕ್ಷ್ಮಿ ಲೇಔಟ್ ಹಾಗೂ ಆರ್. ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ಡಾ.ರಾಜಕುಮಾರ್ ಅವರ ಸಮಾಧಿಗೆ ಹೋಗುವ ರಸ್ತೆ ಎಫ್‌ಟಿಐ ವೃತ್ತದಲ್ಲಿ ಗುಂಡಿಗಳು ಬಿದ್ದಿದ್ದು ಅವುಗಳನ್ನು ಬಿಜೆಪಿ ಪ್ರಮುಖರು ಮುಚ್ಚಿದರು. ‘ಸಮಾಧಿಗೆ ಹೋಗುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದರೂ ಅದನ್ನು ಮುಚ್ಚದೇ ನಿರ್ಲಕ್ಷ್ಯ ವಹಿಸಲಾಗಿದೆ. ನಾಲ್ಕೈದು ಕಡೆ ನಾವು ಗುಂಡಿ ಮುಚ್ಚಿದ್ದೇವೆ’ ಎಂದು ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.