ADVERTISEMENT

‘25 ವಿಧಾನಸಭಾ ಕ್ಷೇತ್ರಗಳ ಗೆಲುವೇ ಗುರಿ’

ಬಿಜೆಪಿ ವತಿಯಿಂದ ಬೆಂಗಳೂರು ಸಂಸದರಿಗೆ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:18 IST
Last Updated 29 ಜೂನ್ 2019, 19:18 IST
ಸಂಸದ ತೇಜಸ್ವಿ ಸೂರ್ಯ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಆರ್.ಅಶೋಕ, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ವಿ. ಸೋಮಣ್ಣ ಇದ್ದಾರೆ     –ಪ್ರಜಾವಾಣಿ ಚಿತ್ರ
ಸಂಸದ ತೇಜಸ್ವಿ ಸೂರ್ಯ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಆರ್.ಅಶೋಕ, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ವಿ. ಸೋಮಣ್ಣ ಇದ್ದಾರೆ     –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಬೆಂಗಳೂರಿನ ಲೋಕ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ, 25ರಲ್ಲಿ ಗೆಲುವು ಪಡೆಯುತ್ತೇವೆ ಎಂಬ ದೃಢಚಿತ್ತದಿಂದ ಕೆಲಸ ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಕ್ಷದ ನೂತನ ಸಂಸದರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ನೂತನ ಸಂಸದರಿಗೆ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 171 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿತ್ತು. ಪಕ್ಷ ಸಂಘಟನೆ ಮತ್ತಷ್ಟು ಗಟ್ಟಿಗೊಳಿಸಬೇಕು ಮತ್ತು ಸದಸ್ಯತ್ವ ನೋಂದಣಿ ಅಭಿಯಾನವನ್ನು ಮತ್ತೊಮ್ಮೆ ಆರಂಭಿಸಬೇಕು. ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ ಪ್ರತಿಯೊಬ್ಬರನ್ನೂ ಪಕ್ಷದ ಸದಸ್ಯರನ್ನಾಗಿ ಮಾಡಬೇಕು’ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಸದಾನಂದ ಗೌಡ, ‘ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವ ಪಕ್ಷ ಬಿಜೆಪಿ. ಆಂಧ್ರಪ್ರದೇಶದಲ್ಲಿಯೂ ಬಿಜೆಪಿ ಸರ್ಕಾರ ರಚಿಸಲು ಪ್ರಯತ್ನಿಸುತ್ತೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಶೀಘ್ರದಲ್ಲಿ ಒಂದೇ ಪಕ್ಷದ ಸರ್ಕಾರ ರಚನೆಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಬೆಂಗಳೂರು ಕೇಂದ್ರದ ಲೋಕ ಸಭಾ ಸದಸ್ಯ ಪಿ.ಸಿ. ಮೋಹನ್‌, ‘ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಲಾಭ ಪಡೆದವರ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದೆ. ಹೆಚ್ಚಿನ ಮನೆಗಳನ್ನು ಮಂಜೂರು ಮಾಡಿಸಲು, ಕೇಂದ್ರದಿಂದ ಅನುದಾನ ತರಲು ಶ್ರಮಿಸುತ್ತೇನೆ’ ಎಂದರು.

ಬೆಂಗಳೂರು ದಕ್ಷಿಣದಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ‘ಜನರ ನಿರೀಕ್ಷೆ ಹುಸಿಗೊಳಿಸುವುದಿಲ್ಲ. ಬೆಂಗಳೂರು ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚು ಅನುದಾನ ತರಲು ಶ್ರಮಿಸುತ್ತೇನೆ’ ಎಂದರು.

ಉಪಾಧ್ಯಕ್ಷ ಆರ್. ಅಶೋಕ, ‘ಲೋಕಸಭಾ ಚುನಾವಣೆ ವೇಳೆ, ಬಿಜೆಪಿ ಬೆಂಬಲಿಸುವವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಯಿತು. ನಮ್ಮ ಬಳಿಯಿದ್ದ ಪಟ್ಟಿಯಲ್ಲಿ ಹೆಸರಿದ್ದರೂ, ಮತಗಟ್ಟೆಯೊಳಗೆ ಆ ಹೆಸರುಗಳು ಇರುತ್ತಿರಲಿಲ್ಲ. ಆದರೂ ಜನ ಬಿಜೆಪಿ ಬೆಂಬಲಿಸಿದರು. ಜಾತಿ, ಮತ, ಹಣ ಬಿಟ್ಟು ದೇಶಕ್ಕಾಗಿ, ನರೇಂದ್ರ ಮೋದಿಯವರಿಗಾಗಿ ಮತ ಹಾಕಿದರು’ ಎಂದರು.

‘ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ವಿದೇಶಗಳಲ್ಲಿ ನಡೆಯುವ ಶೃಂಗಸಭೆಗಳಲ್ಲಿ ಅವರನ್ನು ಹುಡುಕಬೇಕಿತ್ತು. ಅವರನ್ನು ಹಿಂದೆ ನಿಲ್ಲಿಸುತ್ತಿದ್ದರು. ಕುಳ್ಳಗೆ ಇದ್ದ ಅವರು ಕಾಣುತ್ತಿರಲೇ ಇಲ್ಲ. ಈಗ, ಅಮೆರಿಕ ಅಧ್ಯಕ್ಷರೇ ಮುಂದೆ ಬಂದುನರೇಂದ್ರ ಮೋದಿಯವರನ್ನು ಸ್ವಾಗತಿಸುತ್ತಾರೆ’ ಎಂದು ಹೇಳಿದರು.

‘ವೋಟ್‌ ಮೋದಿಗೆ ಹಾಕುತ್ತೀರಾ, ಕೆಲಸಕ್ಕಾದರೆ ನಮ್ಮ ಬಳಿ ಬರ್ತೀರಾ ಎಂದು ಮುಖ್ಯಮಂತ್ರಿ ಅಹಂಕಾರದಿಂದ ಮಾತನಾಡುತ್ತಿದ್ದಾರೆ. ಬೆಂಗಳೂರು–ಮೈಸೂರು ರಸ್ತೆಗೆ ₹7 ಸಾವಿರ ಕೋಟಿ ಕೊಟ್ಟಿದ್ದು ಕೇಂದ್ರ ಸರ್ಕಾರ. ಹಾಸನಜಿಲ್ಲೆ ರಸ್ತೆ ಅಭಿವೃದ್ಧಿಗೆ ₹2 ಸಾವಿರ ಕೊಟ್ಟಿದ್ದು ನಿತಿನ್‌ ಗಡ್ಕರಿ. ಅಟಲ್‌ಬಿಹಾರಿ ವಾಜಪೇಯಿ, ಅನಂತಕುಮಾರ್‌ ನೀಡಿದ ‘ನಮ್ಮ ಮೆಟ್ರೊ’ ಉದ್ಘಾಟನೆ ಮಾಡಲು ಹೋಗುತ್ತೀರಲ್ಲ, ನಿಮಗೆ ನಾಚಿಕೆಯಾಗುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.ಶಾಸಕ ವಿ. ಸೋಮಣ್ಣ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.