ADVERTISEMENT

ಸೋಲಿಗೆ ಹೆದರಿ ಚುನಾವಣೆ ಮುಂದೂಡುತ್ತಿರುವ ಬಿಜೆಪಿ: ಆಮ್ ಆದ್ಮಿ ಪಕ್ಷವು ಆರೋಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 21:46 IST
Last Updated 24 ಸೆಪ್ಟೆಂಬರ್ 2020, 21:46 IST
ಆಮ್ ಆದ್ಮಿ ಪಕ್ಷ
ಆಮ್ ಆದ್ಮಿ ಪಕ್ಷ   

ಬೆಂಗಳೂರು: ‘ಬಿಜೆಪಿ ನೇತೃತ್ವದ ಸರ್ಕಾರವು ಸೋಲಿಗೆ ಹೆದರಿ ಬಿಬಿಎಂಪಿ ಚುನಾವಣೆ ಮುಂದೂಡುತ್ತಿದೆ. ಹಿಂಬಾಲಕರನ್ನು ತೃಪ್ತಿ ಪಡಿಸಲು ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಳ ಮಾಡಲು ಹೊರಟಿದೆ’ ಎಂದು ಆಮ್ ಆದ್ಮಿ ಪಕ್ಷವು ಆರೋಪ ಮಾಡಿದೆ.

ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ‘ಬಿಬಿಎಂಪಿ ವಾರ್ಡ್‌ ಸಂಖ್ಯೆಗಳನ್ನು 250ಕ್ಕೆ ಹೆಚ್ಚಿಸಲು ಶಾಸಕ ಎಸ್ ರಘು ನೇತೃತ್ವದ ಜಂಟಿ ಸಲಹಾ ಸಮಿತಿ ಶಿಫಾರಸು ಮಾಡಿರುವುದು ಹಾಗೂ ವಾರ್ಡ್‌ ಸಂಖ್ಯೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲು ಕರ್ನಾಟಕ ಪೌರಸಭೆಗಳ ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿರುವುದು ಬಿಜೆಪಿಯವರ ಪುಕ್ಕಲುತವನ್ನು ತೋರಿಸುತ್ತದೆ’ ಎಂದರು.

‘ಕೊರೋನಾ ಸೋಂಕು ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ಮಸೂದೆಗಳನ್ನು ಮಂಡಿಸಿ ಉಳಿಗಮಾನ್ಯ ಪದ್ಧತಿ, ಜೀತಪದ್ಧತಿ ಮತ್ತು ವಸಾಹತುಶಾಹಿ ಪದ್ಧತಿಗಳ ಮರುಸ್ಥಾಪನೆಗೆ ಬಿಜೆಪಿ ಮುಂದಾಗಿದೆ. ಆಡಳಿತದ ಬಗ್ಗೆ ಜನ ಬೇಸತ್ತಿದ್ದಾರೆ. ಬಿಬಿಎಂಪಿ ಚುನಾವಣೆ ನಡೆದರೆ ಅಧಿಕಾರವನ್ನು ಹಿಡಿಯುವುದು ಅಸಾಧ್ಯ. ಕೂಡಲೇ ಬಿಬಿಎಂಪಿ ಚುನಾವಣೆ ನಡೆದರೆ ಹೀನಾಯವಾಗಿ ಸೋಲುವುದಾಗಿ ಬಿಜೆಪಿಯವರು ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಕಂಡುಬಂದಿದೆ. ಹಾಗಾಗಿಯೇ ಚುನಾವಣೆಯನ್ನು ಮುಂದೂಡಲು ಬಿಜೆಪಿ ವ್ಯವಸ್ಥಿತ ತಂತ್ರ ರೂಪಿಸಿದೆ’ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.