ಬೆಂಗಳೂರು: ‘ಮೈಸೂರು ದಸರಾ ಉದ್ಘಾಟಿಸಲಿರುವ ಸಾಹಿತಿ ಬಾನು ಮುಷ್ತಾಕ್ ಅವರಿಗೆ ವಿರೋಧ ವ್ಯಕ್ತಪಡಿಸುವ ನೆಪದಲ್ಲಿ ವಿರೋಧ ಪಕ್ಷಗಳು ಮತ ಆಧರಿತ ರಾಜಕೀಯಕ್ಕೆ ಒತ್ತು ನೀಡಿವೆ’ ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಟೀಕಿಸಿದ್ದಾರೆ.
ಬಿಜೆಪಿಯ ನಾಯಕರು, ಕೇಂದ್ರ ಸಚಿವರು ಕೂಡ ವಿಭಿನ್ನವಾಗಿ ಹೇಳಿಕೆ ನೀಡಿದ್ದಾರೆ. ಚಾಮುಂಡಿಬೆಟ್ಟ ಹಿಂದೂಗಳಿಗೆ ಸೀಮಿತವಾದದು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಹಿಂದೂ ಧರ್ಮ, ಹಿಂದೂ, ಮುಸ್ಲಿಂ ಮತಗಳ ಕುರಿತು ಮಾತನಾಡಿರುವುದರ ಹಿಂದೆ ರಾಜಕೀಯ ಇದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯವರು ಹೆಚ್ಚು ಗೌರವಿಸುವ ಸ್ವಾಮಿ ವಿವೇಕಾನಂದರು, ‘ಎಲ್ಲಾ ಧರ್ಮಗಳನ್ನು ನಾನು ಸ್ವೀಕರಿಸುತ್ತೇನೆ. ನಮ್ಮ ಮಾತೃಭೂಮಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮಗಳೆರಡೂ ಮಿಲನವಾಗಬೇಕು ಎನ್ನುವ ಮಾತುಗಳನ್ನಾಡಿದ್ದರು. ಈ ವಿಚಾರದಲ್ಲಿ ವಿವೇಕಾನಂದರ ಹೇಳಿಕೆಗಳನ್ನು ಆ ಪಕ್ಷದ ನಾಯಕರು ಗಮನಿಸಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
‘ಮತಮೌಢ್ಯದಿಂದ ದೂರವಿದ್ದು ನಾವೆಲ್ಲ ಸಮಾನತೆಯ ಭಾವ ಉಳಿಸಿಕೊಳ್ಳುವ ಕುರಿತು ಕುವೆಂಪು ಅವರು ಬಹಳ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದಾರೆ. ಅನಗತ್ಯ ವಿವಾದಗಳಿಂದ ದೂರವಿದ್ದು, ರಾಜ್ಯದ ಬಹುಪಾಲು ಜನರು ಬಯಸುವ ಶಾಂತಿ, ಸಹಬಾಳ್ವೆಗೆ ತೊಂದರೆಯಾಗದಂತೆ ರಾಜಕೀಯ ನಾಯಕರು ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.