ADVERTISEMENT

ಮ್ಯೂಕರ್‌ಮೈಕೊಸಿಸ್‌ ರೋಗಿಗಳಿಗೆ ಹಾಸಿಗೆ ಮೀಸಲು

​ಪ್ರಜಾವಾಣಿ ವಾರ್ತೆ
Published 24 ಮೇ 2021, 20:21 IST
Last Updated 24 ಮೇ 2021, 20:21 IST
ಆರ್. ಅಶೋಕ್
ಆರ್. ಅಶೋಕ್   

ಬೆಂಗಳೂರು: ‌‘ಮ್ಯೂಕರ್‌ಮೈಕೊಸಿಸ್(ಕಪ್ಪು ಶಿಲೀಂದ್ರ) ಸೋಂಕಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಬೌರಿಂಗ್ ಆಸ್ಪತ್ರೆಯಲ್ಲಿ ನೂರು ಹಾಸಿಗೆಗಳನ್ನು ಮೀಸಲಿಡಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ‘ಮ್ಯೂಕರ್‌ಮೈಕೊಸಿಸ್‌ಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು 200 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅದರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 100 ಹಾಸಿಗೆ, ಬೌರಿಂಗ್ ಆಸ್ಪತ್ರೆಯಲ್ಲಿ 100 ಹಾಸಿಗೆ ನಿಗದಿಪಡಿಸಲಾಗಿದೆ. ಮಹಾರಾಷ್ಟ್ರ ಹಾಗೂ ಗುಜರಾತ್ ಪರಿಸ್ಥಿತಿ ಗಮನಿಸಿದರೆ ಇನ್ನೂ ಹೆಚ್ಚಿನ ಹಾಸಿಗೆಗಳ ಅವಶ್ಯಕತೆ ಇದೆ’ ಎಂದರು.

‘ಈ ಕಾಯಿಲೆಯ ಚಿಕಿತ್ಸೆಗೆ ಹೆಚ್ಚಿನ ಲಿಪೊಸೊಮಲ್ ಆಂಫೋಟೆರಿಸಿನ್ ಔಷಧಿ ಅವಶ್ಯಕತೆಯಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇನೆ. ಒಬ್ಬ ರೋಗಿಗೆ ಕನಿಷ್ಠ 70 ವಯಲ್ಸ್ ಬೇಕಾಗುತ್ತದೆ. ಅದು ಗರಿಷ್ಠ 360ಕ್ಕೂ ತಲುಪಬಹುದು. ಆ ನಿಟ್ಟಿನಲ್ಲಿ ಅಂದಾಜು ವಾರಕ್ಕೆ 9,800 ವಯಲ್ಸ್ ನೀಡಬೇಕು ಎಂದು ಕೇಳಿಕೊಂಡಿದ್ದೇನೆ’ ಎಂದರು.

ADVERTISEMENT

‘ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ತಗುಲಬಹುದು ಎಂಬ ಅಭಿಪ್ರಾಯ ಇರುವ ಕಾರಣ ‌ಮಕ್ಕಳ ಆಸ್ಪತ್ರೆಗಳನ್ನ ಸಿದ್ಧಪಡಿಸಲು ಪ್ರಯತ್ನಗಳು ಆರಂಭವಾಗಿವೆ. ಈಗಾಗಲೇ ಪದ್ಮನಾಭನಗರದಲ್ಲಿ ಸೋಂಕಿಗೆ ತುತ್ತಾದ ಮಕ್ಕಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಸಿದ್ಧಪಡಿಸಲು ತಯಾರಿ ನಡೆಯುತ್ತಿದೆ. ಈ ರೀತಿಯ ಸೌಲಭ್ಯವನ್ನು ಬೆಂಗಳೂರಿನ ವಿವಿಧ ಭಾಗಗಳಲ್ಲಿಯೂ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ದಿನಕ್ಕೆ ಸುಮಾರು 7 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಮುಂದಿನ ಹತ್ತು ದಿನಗಳಲ್ಲಿ ಈ ಸಂಖ್ಯೆ 2 ಸಾವಿರಕ್ಕೆ ಇಳಿಯುವ ಸಾಧ್ಯತೆಯಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.