ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ಸೋಮವಾರ ಅಂಧ ಪ್ರಯಾಣಿಕರಿಬ್ಬರು ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದಿದ್ದು, ‘ನಮ್ಮ ಮೆಟ್ರೊ’ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ.
ಅತ್ತಿಗುಪ್ಪೆ ಮೆಟ್ರೊ ನಿಲ್ದಾಣಕ್ಕೆ ಪ್ರಯಾಣಿಸಲು ಸೋಮವಾರ ಮಧ್ಯಾಹ್ನ 1.13ಕ್ಕೆ ಮೂವರು ಅಂಧ ಪ್ರಯಾಣಿಕರು ಮೆಜೆಸ್ಟಿಕ್‌ನ ಹಸಿರು ಮಾರ್ಗದ ನಿಲ್ದಾಣಕ್ಕೆ ಬಂದಿದ್ದರು. ಅದರಲ್ಲಿ ಇಬ್ಬರು ಆಯ ತಪ್ಪಿ ಕೆಳಗೆ ಬಿದ್ದರು. ‘ನಮ್ಮ ಮೆಟ್ರೊ’ ಭದ್ರತಾ ಸಿಬ್ಬಂದಿ ಕೂಡಲೇ ವಿದ್ಯುತ್ ಸರಬರಾಜು ಕಡಿತಗೊಳಿಸಿ, ‘ತುರ್ತು ಟ್ರಿಪ್ ಸಿಸ್ಟಂ’ ಕಾರ್ಯಾಚರಣೆ ನಡೆಸಿ ಸಹ ಪ್ರಯಾಣಿಕರ ನೆರವಿನಿಂದ ಅವರನ್ನು ಮೇಲಕ್ಕೆತ್ತಿದರು.
ಅವರಿಗೆ ಯಾವುದೇ ಗಾಯಗಳಾಗಿಲ್ಲ. ಈ ಘಟನೆಯಿಂದ ಹಸಿರು ಮಾರ್ಗದಲ್ಲಿ ಮಧ್ಯಾಹ್ನ 1.13ರಿಂದ 1.26ರವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸಂಚಾರ ಪುನರಾರಂಭಗೊಂಡಿತು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್‌ನಲ್ಲಿ ಆಯತಪ್ಪಿ ಹಳಿಗೆ ಬಿದ್ದ ಎರಡನೇ ಪ್ರಕರಣ ಇದಾಗಿದೆ. ಆ.3ರಂದು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಾಲ್ಕು ವರ್ಷದ ಬಾಲಕ ಆಯ ತಪ್ಪಿ ಕೆಳಗೆ ಬಿದ್ದಿದ್ದ. ಆತನನ್ನೂ ಸುರಕ್ಷಿತವಾಗಿ ಮೇಲಕ್ಕೆತ್ತಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.