ಬೆಂಗಳೂರು: ತಾಯಂದಿರು ಹಾಗೂ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ರಕ್ತ ಸಂಗ್ರಹಿಸಲು ವಾಣಿವಿಲಾಸ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ಈ ಕೇಂದ್ರವು ವರ್ಷಾಂತ್ಯದೊಳಗೆ ಕಾರ್ಯಾರಂಭ ಮಾಡಲಿದೆ.
ನಗರದ ಪ್ರಮುಖ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇದಾಗಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಅತಿ ದೊಡ್ಡ ತಾಯಿ–ಮಗುವಿನ ಆಸ್ಪತ್ರೆಯೂ ಇದಾಗಿದೆ. ತೃತೀಯ ಹಂತದ ಸಂಕೀರ್ಣ ಪ್ರಕರಣಗಳು ಹೆಚ್ಚಾಗಿ ಇಲ್ಲಿಗೆ ಶಿಫಾರಸು ಆಧಾರದಲ್ಲಿ ಬರುತ್ತಿವೆ. ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಪ್ರತಿನಿತ್ಯ ಸರಾಸರಿ 250ರಿಂದ 300 ಮಂದಿ ಭೇಟಿ ನೀಡುತ್ತಿದ್ದಾರೆ. ಪ್ರತಿ ತಿಂಗಳು ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಲಾಗುತ್ತಿದೆ. ಆಸ್ಪತ್ರೆಗೆ ವಾರ್ಷಿಕ 3,600 ಯುನಿಟ್ ರಕ್ತದ ಅಗತ್ಯತೆಯಿದೆ. ಆದ್ದರಿಂದ ಪ್ರತ್ಯೇಕ ರಕ್ತನಿಧಿ ಕೇಂದ್ರ ನಿರ್ಮಿಸಲಾಗುತ್ತಿದೆ.
ಸದ್ಯ ಆಸ್ಪತ್ರೆಯಲ್ಲಿ ರಕ್ತ ಶೇಖರಣಾ ಘಟಕ ಮಾತ್ರವಿದೆ. ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯವಿರುವ ತಾಯಂದಿರು ವಿಕ್ಟೋರಿಯಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮೇಲೆ ಅವಲಂಬಿತರಾಗುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಕೇಂದ್ರದಲ್ಲಿ ವಾರ್ಷಿಕ 8 ಸಾವಿರ ಯುನಿಟ್ ರಕ್ತಕ್ಕೆ ಬೇಡಿಕೆಯಿದೆ. ಆ ಕೇಂದ್ರವು ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಸರ್ಕಾರಿ ರಕ್ತನಿಧಿ ಕೇಂದ್ರ ಹಾಗೂ ರಕ್ತ ಶೇಖರಣಾ ಘಟಕಗಳಿಗೆ ಮಾತೃ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ತುರ್ತು ಸಂದರ್ಭದಲ್ಲಿ ರಕ್ತ ಪಡೆಯುವುದು ಕಷ್ಟಸಾಧ್ಯವಾಗಿದೆ. ನೂತನ ರಕ್ತನಿಧಿ ಕೇಂದ್ರವು ಈ ಸಮಸ್ಯೆಗೆ ಪರಿಹಾರ ಒದಗಿಸಲಿದೆ.
ಸ್ಥಳ ಗುರುತು: ರಕ್ತನಿಧಿ ಕೇಂದ್ರ ನಿರ್ಮಾಣಕ್ಕೆ ಈಗಾಗಲೇ ಆಸ್ಪತ್ರೆಯ ಕಟ್ಟಡದಲ್ಲಿ ಸ್ಥಳ ಗುರುತಿಸಲಾಗಿದೆ. 3 ಸಾವಿರ ಚದರ ಅಡಿ ಸ್ಥಳಾವಕಾಶದಲ್ಲಿ ಈ ಕೇಂದ್ರವನ್ನು ಸಜ್ಜುಗೊಳಿಸಲಾಗುತ್ತಿದೆ. ಯಂತ್ರೋಪಕರಣ ಅಳವಡಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಔಷಧ ನಿಯಂತ್ರಣ ಇಲಾಖೆ ಅನುಮೋದನೆ ಪಡೆಯಬೇಕಿದೆ. ಸಿಬ್ಬಂದಿ ನೇಮಕಾತಿ ಸೇರಿ ವಿವಿಧ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಐದಾರು ತಿಂಗಳಾಗುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
‘ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ಕಾರ್ಯಾರಂಭಿಸಿದಲ್ಲಿ, ನಿಗದಿತ ಸಮಯದಲ್ಲಿ ತಾಯಂದಿರಿಗೆ ರಕ್ತ ಒದಗಿಸಲು ಸಾಧ್ಯ. ಸದ್ಯ ಆಸ್ಪತ್ರೆಯಲ್ಲಿರುವ ಶೇಖರಣಾ ಘಟಕದ ಮೂಲಕ ರಕ್ತವನ್ನು ನಿರ್ವಹಣೆ ಮಾಡಲಾಗುತ್ತಿದ್ದು, ಪ್ಲಾಸ್ಮಾ ಅಗತ್ಯವಿದ್ದರೆ ವಿಕ್ಟೋರಿಯಾ ಆಸ್ಪತ್ರೆಯ ರಕ್ತನಿಧಿ ಕೇಂದ್ರವನ್ನು ಸಂರ್ಪಕಿಸಲಾಗುತ್ತದೆ’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ರಕ್ತನಿಧಿ ಕೇಂದ್ರ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದ್ದು ವರ್ಷಾಂತ್ಯದೊಳಗೆ ಕೇಂದ್ರ ಕಾರ್ಯಾರಂಭಿಸಲಿದೆ. ಹೆಚ್ಚುವರಿ ರಕ್ತದ ಅಭಾವ ನೀಗಿಸಲು ಕೇಂದ್ರ ಸಹಕಾರಿಡಾ. ಸವಿತಾ ಸಿ., ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ
ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗುತ್ತಿರುವ ಒಳರೋಗಿಗಳಲ್ಲಿ ಶೇ 60ರಷ್ಟು ಮಂದಿ ಶಿಫಾರಸು ಆಧಾರದಲ್ಲಿಯೇ ಬರುತ್ತಿದ್ದಾರೆ. ಅಧಿಕ ರಕ್ತದೊತ್ತಡ ಹೃದಯ ಸಮಸ್ಯೆ ರಕ್ತಸ್ರಾವ ಗರ್ಭಾಶಯದಲ್ಲಿ ತೊಂದರೆ ‘ಪ್ಲೆಸೆಂಟಾ ಪ್ರಿವಿಯಾ’ (ಸಂಪೂರ್ಣವಾಗಿ ಗರ್ಭಕಂಠವನ್ನು ನಿರ್ಬಂಧಿಸುವ ಸ್ಥಿತಿ) ಸೇರಿ ವಿವಿಧ ಸಮಸ್ಯೆ ಎದುರಿಸುತ್ತಿರುವ ತಾಯಂದಿರು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಜಯನಗರ ಸಾರ್ವಜನಿಕ ಆಸ್ಪತ್ರೆ ಕೆ.ಸಿ. ಜನರಲ್ ಸೇರಿ ನಗರದ ವಿವಿಧ ಆಸ್ಪತ್ರೆಗಳಿಂದಲೂ ಸಂಕಿರ್ಣ ಪ್ರಕರಣಗಳನ್ನು ಇಲ್ಲಿಗೆ ಶಿಫಾರಸು ಮಾಡಲಾಗುತ್ತಿದೆ. ಕೋಲಾರ ರಾಮನಗರ ಚಿಕ್ಕಮಗಳೂರು ಸೇರಿ ವಿವಿಧ ಜಿಲ್ಲೆಗಳಿಂದಲೂ ಪ್ರಕರಣಗಳು ಬರುತ್ತಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.