ADVERTISEMENT

ಪ್ಲೇಟ್‌ಲೆಟ್‌ ಕೊರತೆ: ಡೆಂಗಿ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 19:28 IST
Last Updated 1 ಜುಲೈ 2019, 19:28 IST

ಬೆಂಗಳೂರು: ರಾಜ್ಯದ ಬ್ಲಡ್‌ ಬ್ಯಾಂಕ್‌ ಮತ್ತು ಆಸ್ಪತ್ರೆಗಳಲ್ಲಿ ರಕ್ತದ ಪ್ಲೇಟ್‌ಲೆಟ್‌ಗಳ ಕೊರತೆ ಎದುರಾಗಿದ್ದು, ಡೆಂಗಿ ಬಾಧಿತರು ತೊಂದರೆ ಅನುಭವಿಸುತ್ತಿದ್ದಾರೆ.

ಡೆಂಗಿ ಬಾಧಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಪ್ಲೇಟ್‌ಲೆಟ್‌ಗಳ ಅವಶ್ಯಕತೆ ಇದೆ. ಆದರೆ, ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇವುಗಳ ಸಂಗ್ರಹ ತುಂಬಾ ಕಡಿಮೆಯಿರುವುದರಿಂದ ರೋಗಿಗಳು ಅಲೆದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಶಿವಮೊಗ್ಗದಲ್ಲಿ ಈ ವರ್ಷ 176 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಆದರೆ, 30 ಯೂನಿಟ್‌ನಷ್ಟು ಪ್ಲೇಟ್‌ಲೆಟ್‌ಗಳು ಮಾತ್ರ ಜಿಲ್ಲೆಯಲ್ಲಿ ಲಭ್ಯ ಇವೆ. ಒಬ್ಬನೇ ರೋಗಿಗಳಿಗೆ ಹಲವು ಯೂನಿಟ್‌ಗಳ ಅಗತ್ಯವಿದೆ. ಆದರೆ, ಅಷ್ಟು ಸಂಗ್ರಹ ನಮ್ಮಲ್ಲಿಲ್ಲ ಎಂದು ವೈದ್ಯರೊಬ್ಬರು ಹೇಳಿದರು.

ADVERTISEMENT

ಈ ಕುರಿತು, ನಗರದಲ್ಲಿನ ಹಲವು ಬ್ಲಡ್‌ ಬ್ಯಾಂಕ್‌ಗಳನ್ನು ಸಂಪರ್ಕಿಸಿದಾಗ, ಪ್ಲೇಟ್‌ಲೆಟ್‌ಗಳ ಸಂಗ್ರಹ ಕಡಿಮೆ ಇದೆ ಎಂದು ಕೆಲವರು ಹೇಳಿದರೆ, ಅಗತ್ಯವಿರುವವರು ರಕ್ತದಾನಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಬಂದರೆ, ಅವರಿಂದ ಪ್ಲೇಟ್‌ಲೆಟ್‌ ಸಂಗ್ರಹಿಸಿ ನೀಡುವುದಾಗಿ ಹೇಳಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲೇಟ್‌ಲೆಟ್‌ಗಳ ಸಂಗ್ರಹವೇ ಇಲ್ಲ ಎಂದು ಸಿಬ್ಬಂದಿ ಹೇಳಿದರು.

ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ ಸೋಮವಾರ, ನಾಲ್ಕು ಯೂನಿಟ್‌ನಷ್ಟು ಪ್ಲೇಟ್‌ಲೆಟ್‌ಗಳು ಮಾತ್ರ ಇದ್ದವು. ರೋಗಿಯೊಬ್ಬರು ಈಗಾಗಲೇ ಇವುಗಳನ್ನು ಕಾಯ್ದಿರಿಸಿದ್ದು, ಅವರ ಚಿಕಿತ್ಸೆಗೆ ಅವುಗಳನ್ನು ಬಳಸಲಾಗುವುದು ಎಂದು ಸಿಬ್ಬಂದಿ ಹೇಳಿದರು.

ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆಗೆ ಸಿಗಲಿಲ್ಲ. ‘ನಗರದಲ್ಲಿ ಈ ವರ್ಷ 1,041 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.