ADVERTISEMENT

ರಕ್ತದ ಕ್ಯಾನ್ಸರ್, ರೋಗಿಗಳಿಗೆ ಸಿಗದ ದಾನಿಗಳು: ಸಿಇಒ ಪ್ಯಾಟ್ರಿಕ್ ಪಾಲ್‍ ಕಳವಳ

ಡಿಕೆಎಂಎಸ್–ಬಿಎಂಎಸ್‌ಟಿ ಫೌಂಡೇಷನ್ ಸಿಇಒ ಪ್ಯಾಟ್ರಿಕ್ ಪಾಲ್‍ ಕಳವಳ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 20:23 IST
Last Updated 14 ಸೆಪ್ಟೆಂಬರ್ 2022, 20:23 IST
ರಕ್ತದ ಆಕರ ಕೋಶ ದಾನಿಗಳಾದ ಅರುಷಿತ್, ದೇಬ್ರಾಜ್, ಡೇನಿಯಲ್ ಮತ್ತು ಸುರೇಶ್ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಪ್ಯಾಟ್ರಿಕ್ ಪಾಲ್‍ ಹಾಗೂ ಡಾ. ಸುನೀಲ್ ಭಟ್ ಇದ್ದಾರೆ.
ರಕ್ತದ ಆಕರ ಕೋಶ ದಾನಿಗಳಾದ ಅರುಷಿತ್, ದೇಬ್ರಾಜ್, ಡೇನಿಯಲ್ ಮತ್ತು ಸುರೇಶ್ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಪ್ಯಾಟ್ರಿಕ್ ಪಾಲ್‍ ಹಾಗೂ ಡಾ. ಸುನೀಲ್ ಭಟ್ ಇದ್ದಾರೆ.   

ಬೆಂಗಳೂರು: ‘ರಕ್ತದ ಕ್ಯಾನ್ಸರ್‌ ಹಾಗೂ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಸಹಾಯಕ. ಈ ರೋಗಿಗಳಲ್ಲಿ ಶೇ 30ರಷ್ಟು ಮಂದಿಗೆ ಮಾತ್ರ ಹೊಂದಾಣಿಕೆಯಾಗುವ ರಕ್ತದ ಆಕರ ಕೋಶ ದೊರೆಯುತ್ತಿದೆ’ ಎಂದು ಡಿಕೆಎಂಎಸ್–ಬಿಎಂಎಸ್‌ಟಿ ಫೌಂಡೇ
ಷನ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ಯಾಟ್ರಿಕ್ ಪಾಲ್‍ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಫೌಂಡೇಷನ್ ಆಯೋಜಿಸಿದ ಕಾರ್ಯಕ್ರಮದಲ್ಲಿ ರಕ್ತದ ಆಕರ ಕೋಶ ದಾನಿಗಳಾದ ಅರುಷಿತ್, ದೇಬ್ರಾಜ್, ಡೇನಿಯಲ್ ಮತ್ತು ಸುರೇಶ್ ಅವರನ್ನು ಸನ್ಮಾನಿಸಿ, ಮಾತನಾಡಿದರು.

‘ದೇಶದಲ್ಲಿ ಪ್ರತಿವರ್ಷ ಲಕ್ಷಕ್ಕೂ ಅಧಿಕ ಮಂದಿ ರಕ್ತದ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ರಕ್ತದ ಕ್ಯಾನ್ಸರ್‌ ಹಾಗೂ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಸಹಾಯಕ. ದಾನಿಗಳ ರಕ್ತದಿಂದ ಆಕರ ಕೋಶಗಳನ್ನು ಪಡೆದು, ಅಸ್ಥಿಮಜ್ಜೆ ಹಾಳಾಗಿರುವಂತಹ ರೋಗಿಗಳಿಗೆ ಕಸಿ ಮಾಡಲಾಗುತ್ತದೆ. ಇದು ಅಗತ್ಯವಿರುವಂತಹ ರೋಗಿಗಳಲ್ಲಿ ಶೇ 70ರಷ್ಟು ಮಂದಿಗೆ ಕುಟುಂಬದ ಸದಸ್ಯರು ಹಾಗೂ ಸಂಬಂಧಿಗಳ ರಕ್ತದ ಆಕರಕೋಶ ಹೊಂದಾಣಿಕೆ ಆಗುವುದಿಲ್ಲ’ ಎಂದು ತಿಳಿಸಿದರು.

ADVERTISEMENT

‘ಡಿಕೆಎಂಎಸ್– ಬಿಎಂಎಸ್‌ಟಿ ದಾನಿಗಳ ರಕ್ತದ ಆಕರಕೋಶ ರಿಜಿಸ್ಟ್ರಿಯಲ್ಲಿ ಕರ್ನಾಟಕದ 27,500 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಫೌಂಡೇಷನ್‌ನಿಂದ ಮೂರು ವರ್ಷಗಳಲ್ಲಿ ದೇಶದಾದ್ಯಂತ 67 ರಕ್ತದ ಆಕರಕೋಶ ಕಸಿಗಳನ್ನು ನಡೆಸಲಾಗಿದೆ. ರೋಗಿಗಳಿಗೆಆರಂಭಿಕ ಹಂತದಲ್ಲಿಯೆ ಹೊಂದಾಣಿಕೆಯಾಗುವ ದಾನಿ ಸಿಕ್ಕಲ್ಲಿ ವ್ಯಕ್ತಿ ಬೇಗ ಚೇತರಿಸಿಕೊಳ್ಳುತ್ತಾನೆ’ ಎಂದು ಹೇಳಿದರು.

ನಾರಾಯಣ ಹೆಲ್ತ್‌ನ ಕಸಿ ವಿಭಾಗದ ನಿರ್ದೇಶಕ ಡಾ. ಸುನೀಲ್ ಭಟ್, ‘ರಕ್ತದ ಆಕರ ಕೋಶಗಳು ಆರು ವಾರಗಳಲ್ಲಿ ಮತ್ತೆ ಬೆಳೆಯುತ್ತವೆ. ರಕ್ತದಿಂದ ಆಕರ ಕೋಶಗಳನ್ನು ಪಡೆಯುವ ಪ್ರಕ್ರಿಯೆ 4ರಿಂದ 5 ಗಂಟೆಗಳಲ್ಲಿ ಮುಕ್ತಾಯವಾಗಲಿದೆ. ಕೇವಲ 200ರಿಂದ 250 ಎಂ.ಎಲ್ ರಕ್ತವನ್ನು ಪಡೆಯಲಾಗುತ್ತದೆ. ದಾನಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ವಿವರಿಸಿದರು.

ರಕ್ತದ ಆಕರ ಕೋಶ ದಾನಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ರಕ್ತದ ಆಕರ ಕೋಶ ದಾನ ಮಾಡುವಂತೆ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.