ADVERTISEMENT

ಕಾಂಡಕೋಶ ದಾನ ಮಾಡಿದ ಕ್ರೀಡಾಳು

​ಪ್ರಜಾವಾಣಿ ವಾರ್ತೆ
Published 19 ಮೇ 2019, 20:01 IST
Last Updated 19 ಮೇ 2019, 20:01 IST

ಬೆಂಗಳೂರು: ಟೇಬಲ್ ಟೆನಿಸ್ ಆಟಗಾರ ಹರ್ಪ್ರೀತ್ ಸಿಂಗ್ ಬೂಮ್ರಾ ರಕ್ತದ ಕಾಂಡಕೋಶ ದಾನ ಮಾಡುವ ಮೂಲಕ ಬಾಲಕನಿಗೆ ಜೀವದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಹರ್ಪ್ರೀತ್ ಸಿಂಗ್ ರಾಜ್ಯವನ್ನುಪ್ರತಿನಿಧಿಸುತ್ತಿರುವ ಟೇಬಲ್‌ ಟೆನಿಸ್‌ ಆಟಗಾರ. 43ರ ಹರೆಯದ ಇವರು ವೃತ್ತಿಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಮಾದರಿಯಾಗಿದ್ದಾರೆ.

ರಕ್ತದಕ್ಯಾನ್ಸರ್‌ ಮತ್ತು ಇತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ರಕ್ತಕಾಂಡ ಕೋಶ ದಾನ ಮಾಡಿಸಲು ನೆರವಾಗುವ ಉದ್ದೇಶದಿಂದ‘ಧಾತ್ರಿ ಬ್ಲಡ್ ಸ್ಟೆಮ್ ಸೆಲ್ ಡೋನರ್ ರಿಜಿಸ್ಟ್ರಿ’ಯು ಅಸ್ತಿತ್ವಕ್ಕೆ ಬಂದಿದೆ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕ ಮತ್ತು ದಾನಿ ಹರ್ಪ್ರೀತ್ ಸಿಂಗ್ ಬೂಮ್ರಾ ನಡುವೆ ಧಾತ್ರಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿದೆ.

ADVERTISEMENT

ರಕ್ತದ ಕಾಂಡಕೋಶ ದಾನ ಮಾಡಿದ ಬಳಿಕವೂ ಹರ್ಪ್ರೀತ್ ಸಿಂಗ್ ಬೂಮ್ರಾ ಅವರು ಮೊದಲಿನಂತೆ ಟೇಬಲ್ ಟೆನಿಸ್ ಆಟವನ್ನು ಮುಂದುವರೆಸಿದ್ದಾರೆ ಎಂದು ಧಾತ್ರಿಬ್ಲಡ್ ಸ್ಟೆಮ್ ಸೆಲ್ ಡೋನರ್ ರಿಜಿಸ್ಟ್ರಿ ತಿಳಿಸಿದೆ.

ಹರ್ಪ್ರೀತ್ ಸಿಂಗ್ ಬೂಮ್ರಾ ಅವರು 2012ರಲ್ಲೇ ಧಾತ್ರಿ ತಂಡದವರನ್ನು ಸಂಪರ್ಕಿಸಿ, ರಕ್ತದ ಕಾಂಡಕೋಶ ದಾನ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದರು. ಇದೀಗ ಅವರ ರಕ್ತದ ಕಾಂಡಕೋಶ ಬಾಲಕನಿಗೆ ಹೊಂದಿಕೆಯಾಗಿದೆ. ಕಳೆದ ಮಾರ್ಚ್‌ನಲ್ಲಿ ರಕ್ತದ ಕಾಂಡಕೋಶವನ್ನು ದಾನ ಮಾಡಿ, ಬಳಿಕ ನಗರದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿ, ರನ್ನರ್‌ಅಪ್ ಆಗಿಯೂ ಹೊರಹೊಮ್ಮಿದ್ದಾರೆ.

ರಕ್ತದ ಕ್ಯಾನ್ಸರ್‌, ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಕಾಂಡಕೋಶದ ಕಸಿ ಮಾಡಿದರೆ ಜೀವ ಉಳಿಸಲು ಸಾಧ್ಯ. ರಕ್ತದ ಕಾಂಡಕೋಶವನ್ನು ಪ್ರತಿಯೊಬ್ಬರೂ ದಾನ ಮಾಡಬಹುದಾಗಿದ್ದು, ಇದರಿಂದ ದಾನಿಯ ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇಷ್ಟಾಗಿಯು ಕೂಡ ದಾನಿಗಳ ಕೊರತೆಯಿಂದ ಶೇ 40ರಷ್ಟು ಪ್ರಕರಣದಲ್ಲಿ ಹೊಂದಿಕೆಯಾಗುವ ರಕ್ತದ ಕಾಂಡಕೋಶ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ಧಾತ್ರಿಸಂಸ್ಥೆ ಹೇಳಿದೆ.

4 ಲಕ್ಷ ದಾನಿಗಳು ನೋಂದಣಿ: ಧಾತ್ರಿಬ್ಲಡ್ ಸ್ಟೆಮ್ ಸೆಲ್ ಡೋನರ್ ರಿಜಿಸ್ಟ್ರಿ ಸಂಸ್ಥೆಯು ರಕ್ತದ ಕಾಂಡಕೋಶದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಈವರೆಗೆ ಈ ಸಂಸ್ಥೆಯೊಂದರಲ್ಲೇ ದೇಶದ ವಿವಿಧೆಡೆ ಒಟ್ಟು 4 ಲಕ್ಷ ಮಂದಿ ರಕ್ತದ ಕಾಂಡಕೋಶ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ಅದೇ ರೀತಿ, ರಾಜ್ಯದಲ್ಲಿ 39,124 ಮಂದಿ ಹೆಸರು ನೋಂದಾಯಿಸಿದ್ದು, 42 ಮಂದಿ ದಾನ ಮಾಡಿದ್ದಾರೆ.ರೋಗಿಗಳಿಗೆ ಶೇ25ರಷ್ಟು ಕುಟುಂಬದ ಸದಸ್ಯರ ರಕ್ತದ ಕಾಂಡಕೋಶ ಹೊಂದಿಕೆಯಾಗುವ ಸಾಧ್ಯತೆ ಇರುತ್ತದೆ. ಜಾಗೃತಿ ಕೊರತೆಯಿಂದ ದೇಶದಲ್ಲಿ ರಕ್ತದ ಕಾಂಡಕೋಶದ ಅಭಾವ ಎದುರಾಗಿದೆ.ರಕ್ತದ ಕಾಂಡಕೋಶ ದಾನ ಮಾಡಲು ಇಚ್ಛಿಸುವವರು ಹಾಗೂ ಅವಶ್ಯಕತೆ ಇರುವವರುವಿವರಗಳಿಗೆ www.datri.orgಸಂಪರ್ಕಿಸಬಹುದು.

ಬ್ಲಡ್ ಸ್ಟೆಮ್‌ ಸೆಲ್ ಎಂದರೇನು?

‘ರಕ್ತದ ಬಿಳಿ ಕಣಗಳಲ್ಲಿ ಜೀವರಕ್ಷಕ ಆಕರ ಕೋಶಗಳಿರುತ್ತವೆ. ಇದನ್ನು ರಕ್ತದ ಕಾಂಡಕೋಶ (ಬ್ಲಡ್ ಸ್ಟೆಮ್‌ಸೆಲ್) ಎಂದೂ ಹೇಳಲಾಗುತ್ತದೆ. ಈ ಕಾಂಡಕೋಶವು ಕೆಂಪು ರಕ್ತ, ಬಿಳಿ ರಕ್ತ ಕಣ ಹಾಗೂ ಪ್ಲೇಟ್ಲೇಟ್ಸ್ ವೃದ್ಧಿಗೆ ನೆರವಾಗುತ್ತದೆ. ಸ್ಟೆಮ್‌ ಸೆಲ್ ಮೂಲಕ ರಕ್ತದ ಯಾವುದೇ ಕಣವನ್ನು ವೃದ್ಧಿಸಬಹುದಾಗಿದೆ. ಹಾಗಾಗಿ ರಕ್ತದ ಕ್ಯಾನ್ಸರ್, ರೋಗನಿರೋಧಕ ಶಕ್ತಿ ಕುಗ್ಗುವುದು, ಸಿಕಲ್ ಸೆಲ್ ಅನೀಮಿಯಾ, ಥಲಸ್ಸೇಮಿಯಾ ಮತ್ತಿತರ ತೊಂದರೆಗಳಿಂದ ಬಳಲುವವರಿಗೆ ಸೂಕ್ತ ಕಾಂಡಕೋಶ ನೀಡಿ ಚಿಕಿತ್ಸೆ ನೀಡಬಹುದು’ ಎಂದು ಧಾತ್ರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.