ADVERTISEMENT

ಎಲ್ಲರ ಸಹಕಾರವಿದ್ದರೆ ‘ಬ್ಲೂ-ಗ್ರೀನ್’ ವಾರ್ಡ್‌ ನಿರ್ಮಾಣ: ಪ್ರೀತಿ ಗೆಹಲೋತ್‌

‘ಕ್ಲಸ್ಟರ್ ಆಧಾರಿತ ದೃಷ್ಟಿಕೋನ’ ಕಾರ್ಯಾಗಾರದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 14:13 IST
Last Updated 21 ಆಗಸ್ಟ್ 2025, 14:13 IST
ಪ್ರೀತಿ ಗೆಹಲೋತ್‌
ಪ್ರೀತಿ ಗೆಹಲೋತ್‌   

ಬೆಂಗಳೂರು: ಹವಾಮಾನ ಪ್ರತಿರೋಧಕ ‘ಬ್ಲೂ-ಗ್ರೀನ್’ ವಾರ್ಡ್‌ಗಳ ನಿರ್ಮಾಣಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹಲೋತ್‌ ತಿಳಿಸಿದರು.

ಬಿಬಿಎಂಪಿ ಹಾಗೂ ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ ಇಂಡಿಯಾ ಗುರುವಾರ ಆಯೋಜಿಸಿದ್ದ ‘ಬ್ಲೂ-ಗ್ರೀನ್ ವಾರ್ಡ್‌ಗಳ ನಿರ್ಮಾಣದತ್ತ ಕ್ಲಸ್ಟರ್ ಆಧಾರಿತ ದೃಷ್ಟಿಕೋನ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಪ್ರಾರಂಭದಲ್ಲಿ ಹತ್ತು ಕ್ಲಸ್ಟರ್‌ಗಳನ್ನು ಆಯ್ಕೆ ಮಾಡಿ ಅವುಗಳನ್ನು ಮಾದರಿ ಕ್ಲಸ್ಟರ್‌ಗಳಾಗಿ ರೂಪಿಸಲಾಗುವುದು. ಅವುಗಳ ಮೂಲಕ ಪರಿಸರ ಸ್ನೇಹಿ ವಾರ್ಡ್‌ಗಳನ್ನು ಪರಿಣಾಮಕಾರಿಯಾಗಿ ನಿರ್ಮಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಹವಾಮಾನ ಸ್ನೇಹಿ ರಸ್ತೆಯ ವಿನ್ಯಾಸ, ಅನುಕೂಲಕರ ಪಾದಚಾರಿ ಮಾರ್ಗ ಒಳಗೊಂಡ ಸುರಕ್ಷಿತ ಮತ್ತು ವಾಸಯೋಗ್ಯ ನಗರವನ್ನು ನಿರ್ಮಿಸುವ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚೆ ನಡೆಯಿತು. 

ಜಮೀನು ಹಸ್ತಾಂತರದ ವಿಳಂಬ, ಆರ್ಥಿಕ ಸಂಪನ್ಮೂಲಗಳ ಕೊರತೆ, ಯೋಜನೆ ಗುರುತಿಸುವಿಕೆ, ಹಣಕಾಸು ಮಾದರಿಗಳು ಮತ್ತು ದೀರ್ಘಕಾಲಿಕ ನಿರ್ವಹಣೆ ಕುರಿತು ಸಭೆಯಲ್ಲಿದ್ದವರು ಗಮನ ಸೆಳೆದರು. 

ವಿವಿಧ ಇಲಾಖೆಗಳ ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ತಜ್ಞರು ಹಾಗೂ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.