ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿರುವ ಸಂಧಿವಾತ–ಕೀಲುರಿತ (ರುಮಟಾಲಜಿ) ಚಿಕಿತ್ಸಾ ಕ್ಲಿನಿಕ್‌ಗೆ ಭೇಟಿ ನೀಡುವ ರೋಗಿಗಳಿಗೆ ಔಷಧ ಸಮಸ್ಯೆ ತಲೆದೋರಿದ್ದು, ವೈದ್ಯರು ಬರೆಯುವ ಬಹುತೇಕ ಔಷಧಗಳು ಸಂಸ್ಥೆಯ ಔಷಧಾಲಯದಲ್ಲಿ ದೊರೆಯುತ್ತಿಲ್ಲ.
ವಿಕ್ಟೋರಿಯಾ ಆಸ್ಪತ್ರೆಯ ಹೊರರೋಗಿ ವಿಭಾಗದ (ಒಪಿಡಿ) ಮೊದಲ ಮಹಡಿಯಲ್ಲಿ ಈ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ವೈದ್ಯಕೀಯ ವ್ಯವಸ್ಥೆಯಡಿಯ ಏಕೈಕ ಕ್ಲಿನಿಕ್ ಇದಾಗಿದೆ. ರಾಜ್ಯದಲ್ಲಿ ಸಂಧಿವಾತ ತಜ್ಞರ ಕೊರತೆಯಿಂದಾಗಿ, ಸಂಧಿವಾತ ಮತ್ತು ಕೀಲು ಸಮಸ್ಯೆ ಎದುರಿಸುತ್ತಿರುವವರಿಗೆ ಚಿಕಿತ್ಸೆ ಸಮಸ್ಯೆಯಾಗಿದೆ. ಆದ್ದರಿಂದ ಇಂಡಿಯನ್ ರುಮಟಾಲಜಿ ಅಸೋಸಿಯೇಷನ್ ಕರ್ನಾಟಕ ಶಾಖೆಯ (ಐಆರ್‌ಎಕೆಸಿ) ಜತೆಗೆ ಬಿಎಂಸಿಆರ್‌ಐ ಒಪ್ಪಂದ ಮಾಡಿಕೊಂಡಿದ್ದು, ಪ್ರತಿ ಗುರುವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಈ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ರೋಗಿಗಳಿಗೆ ವೈದ್ಯರು ಸೂಚಿಸುವ ಔಷಧಗಳು ವಿಕ್ಟೋರಿಯಾ ಆಸ್ಪತ್ರೆಯ ಔಷಧಾಲಯದಲ್ಲಿ ಸಿಗದಿದ್ದರಿಂದ ಖಾಸಗಿ ಔಷಧ ಮಳಿಗೆಗಳನ್ನು ಅವಲಂಬಿಸಬೇಕಾಗಿದೆ.
2023ರ ಆ.1ರಿಂದ ಈ ಕ್ಲಿನಿಕ್ ಸೇವೆ ನೀಡುತ್ತಿದೆ. ಈ ಹಿಂದೆ ಇಂಡಿಯನ್ ರುಮಟಾಲಜಿ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿದ್ದ, ಸಂಧಿವಾತ ತಜ್ಞ ಡಾ.ಕೆ.ಎಂ. ಮಹೇಂದ್ರನಾಥ್ ನೇತೃತ್ವದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ನೀಡಲಾಗುತ್ತಿದೆ. ಅವರು ಸಂದರ್ಶಕ ಸಮಾಲೋಚಕರಾಗಿ ಭೇಟಿ ನೀಡುತ್ತಿದ್ದಾರೆ. ಒಪ್ಪಂದದ ಅನುಸಾರ, ಬಿಎಂಸಿಆರ್‌ಐ ಚಿಕಿತ್ಸೆಗೆ ಔಷಧ ಹಾಗೂ ಅಗತ್ಯ ಮೂಲಸೌಕರ್ಯವನ್ನು ಒದಗಿಸಬೇಕಿದೆ. ವೈದ್ಯಕೀಯ ಸೇವೆಯನ್ನು ಐಆರ್‌ಎಕೆಸಿ ವತಿಯಿಂದ ಒದಗಿಸಲಾಗುತ್ತಿದೆ.
ಎರಡು ಕೊಠಡಿ: ಕ್ಲಿನಿಕ್ ನಡೆಸಲು ಎರಡು ಕೊಠಡಿಗಳನ್ನು ನೀಡಲಾಗಿದ್ದು, ಮೂಲಸೌಕರ್ಯ ಒದಗಿಸಿಲ್ಲ. ರೋಗಿಗಳ ನಿರ್ವಹಣೆಗೆ ಶುಶ್ರೂಷಕರನ್ನೂ ನೇಮಿಸಿಲ್ಲ. ಹೊರರೋಗಿಗಳಿಗೆ ಕುಳಿತುಕೊಳ್ಳಲು ಹೆಚ್ಚಿನ ಆಸನ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಸಂಧಿವಾತ ಸಮಸ್ಯೆ ಎದುರಿಸುತ್ತಿರುವವರಲ್ಲಿ ಕೆಲವರು ವೈದ್ಯಕೀಯ ಸೇವೆಗೆ ನಿಂತೇ ಇರಬೇಕಾದ ಪರಿಸ್ಥಿತಿಯಿದೆ. ವಿಕ್ಟೋರಿಯಾ ಆಸ್ಪತ್ರೆಯ ಒಳಗಡೆ ಪ್ರಯೋಗಾಲಯ ಇಲ್ಲದಿರುವುದರಿಂದ ‘ಆ್ಯಂಟಿ ನ್ಯೂಕ್ಲಿಯರ್ ಆ್ಯಂಟಿಬಾಡೀಸ್’ ಪರೀಕ್ಷೆ ಸೇರಿ ವಿವಿಧ ಪರೀಕ್ಷೆಗಳಿಗೆ ರೋಗಿಗಳು ಅಲೆದಾಟ ನಡೆಸಬೇಕಾಗಿದೆ.
‘ವೈದ್ಯರು ಬರೆದುಕೊಡುವ ಬಹುತೇಕ ಮಾತ್ರೆಗಳನ್ನು ಹೊರಗಡೆಯೇ ಖರೀದಿಸಬೇಕಾಗಿದೆ. ದುಬಾರಿ ದರದ ಮಾತ್ರೆಗಳು ವಿಕ್ಟೋರಿಯಾ ಆಸ್ಪತ್ರೆಯ ಔಷಧಾಲಯದಲ್ಲಿ ದೊರೆಯುತ್ತಿಲ್ಲ. ಇರುವ ಮಾತ್ರೆಯನ್ನೂ ವೈದ್ಯರು ಒಂದು ತಿಂಗಳಿಗೆ ಬರೆದರೆ, ಒಂದು ವಾರಕ್ಕೆ ಮಾತ್ರ ನೀಡಲಾಗುತ್ತಿದೆ. ಪ್ರಯೋಗಾಲಯ ಪರೀಕ್ಷೆಗೂ ಅಲೆದಾಟ ನಡೆಸಬೇಕಾಗಿದೆ’ ಎಂದು ರೋಗಿಗಳು ಬೇಸರ ವ್ಯಕ್ತಪಡಿಸಿದರು.
‘ವೈದ್ಯರು ಬರೆದ ಔಷಧಗಳಲ್ಲಿ ಒಂದೆರಡು ಔಷಧಗಳನ್ನು ಮಾತ್ರ ಉಚಿತವಾಗಿ ನೀಡಲಾಗುತ್ತಿದೆ. ದುಬಾರಿ ಬೆಲೆಯ ಔಷಧಗಳು ದೊರೆಯುತ್ತಿಲ್ಲ’ ಎಂದು ಸುಂಕದಕಟ್ಟೆಯ ಶಶಿಕಲಾ ತಿಳಿಸಿದರು.
‘ಆಸ್ಪತ್ರೆಯಲ್ಲಿಯೇ ಎಲ್ಲ ಔಷಧಗಳು ದೊರೆತರೆ ಸಹಕಾರಿಯಾಗಲಿದೆ. ಲಭ್ಯವಿರುವ ಔಷಧವನ್ನು ವೈದ್ಯರು ಬರೆದಷ್ಟು ಕೂಡ ನೀಡುತ್ತಿಲ್ಲ’ ಎಂದು ಬನ್ನೇರುಘಟ್ಟದ ಜಗದೀಶ್ ಹೇಳಿದರು.
**
ಚಿಕಿತ್ಸೆಗೆ ಬರುವವರು ಬಡವರಾದ್ದರಿಂದ ಅವರಿಗೆ ಮಾತ್ರೆಗಳ ವೆಚ್ಚ ಭರಿಸುವುದು ಕಷ್ಟಸಾಧ್ಯವಾಗಲಿದೆ. ಈ ಬಗ್ಗೆ ಬಿಎಂಸಿಆರ್‌ಐಗೆ ಪತ್ರ ಬರೆಯಲಾಗಿದೆ
-ಡಾ.ಕೆ.ಎಂ. ಮಹೇಂದ್ರನಾಥ್ ಕ್ಲಿನಿಕ್‌ನ ಸಂಧಿವಾತ ತಜ್ಞ
***
ರೋಗಿಗಳ ಸಂಖ್ಯೆ ಹೆಚ್ಚಳ
ಖಾಸಗಿ ವ್ಯವಸ್ಥೆಯಡಿ ವೈದ್ಯರ ಸಮಾಲೋಚನಾ ಶುಲ್ಕ ಅಧಿಕವಿರುವ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಕ್ಲಿನಿಕ್‌ಗೆ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ವೈದ್ಯರ ಲಭ್ಯತೆ ಆಧರಿಸಿ 50ರಿಂದ 60 ಹೊರರೋಗಿಗಳಿಗೆ ಪ್ರತಿ ಗುರುವಾರ ಚಿಕಿತ್ಸೆ ಒದಗಿಸಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಒಳರೋಗಿಗಳನ್ನೂ ಈ ಕ್ಲಿನಿಕ್‌ಗೆ ಕರೆತರಲಾಗುತ್ತದೆ. ನೆರೆಯ ರಾಜ್ಯಗಳಿಂದಲೂ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಯಾವೆಲ್ಲ ಔಷಧ ಸಮಸ್ಯೆ?
‘ಹೈಡ್ರಾಕ್ಸಿಕ್ಲೋರೋಕ್ವಿನ್’ ‘ಮೆಥೊಟ್ರೆಕ್ಸೇಟ್’ ‘ಲೆಫ್ಲುನೊಮೈಡ್’ ‘ಡೆಫ್ಲಾಜಾಕೋರ್ಡ್’ ‘ಎಂಎಂಎಫ್’ ‘ಟ್ಯಾಕ್ರೊಲಿಮಸ್’ ‘ಡೆಪೋಮೆಡ್ರೋಲ್ ಇಂಜೆಕ್ಷನ್’ ಸೇರಿ ಸಂಧಿವಾತಕ್ಕೆ ಸಂಬಂಧಿಸಿದ ವಿವಿಧ 15 ಜೀವರಕ್ಷಕ ಔಷಧಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಔಷಧಾಲಯದಲ್ಲಿ ದಾಸ್ತಾನು ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.