ADVERTISEMENT

ನಮ್ಮ ಮೆಟ್ರೊ: ಮೇಲ್ಸೇತುವೆ ನಿರ್ಮಾಣ –ಟ್ರಾವೆಲೇಟರ್‌ ಅನುಮಾನ

ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ನ್ಯೂಬಂಬೂ ಬಜಾರ್‌ ಮೆಟ್ರೊ ನಿಲ್ದಾಣದವರೆಗೆ ಸೌಲಭ್ಯ

ಗುರು ಪಿ.ಎಸ್‌
Published 7 ಡಿಸೆಂಬರ್ 2019, 7:02 IST
Last Updated 7 ಡಿಸೆಂಬರ್ 2019, 7:02 IST
.
.   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ನಾಗವಾರ–ಗೊಟ್ಟಿಗೆರೆ ಮಾರ್ಗದಡಿ (ರೀಚ್‌ 6) ಬರುವ ಕಂಟೋನ್ಮೆಂಟ್‌ ಮೆಟ್ರೊ ನಿಲ್ದಾಣದಿಂದ (ಬಂಬೂ ಬಜಾರ್) ಕಂಟೋನ್ಮೆಂಟ್‌ ರೈಲು ನಿಲ್ದಾಣದ ನಡುವೆ ಪಾದಚಾರಿ ಮೇಲ್ಸೇತುವೆ ತಲೆ ಎತ್ತಲಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಒಪ್ಪಿದೆ. ಆದರೆ, ಮೇಲ್ಸೇತುವೆ ಜೊತೆಗೆ ಟ್ರಾವೆಲೇಟರ್‌ ಒದಗಿಸುವ ಬಗ್ಗೆ ನಿಗಮ ಖಚಿತ ಭರವಸೆ ನೀಡಿಲ್ಲ.

‘ಶಿವಾಜಿ ನಗರದಲ್ಲಿನ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಾರು ನಿಲುಗಡೆಯ ಸ್ಥಳದಲ್ಲಿಯೇ ಮೆಟ್ರೊ ನಿಲ್ದಾಣ ಮಾಡಬೇಕಿತ್ತು. ಆದರೆ, ನಿಗಮವು ನ್ಯೂ ಬಂಬೂಬಜಾರ್‌ನ ಆಟದ ಮೈದಾನದಲ್ಲಿ ನಿಲ್ದಾಣ ನಿರ್ಮಿಸುತ್ತಿರುವುದರಿಂದ ಕಂಟೋನ್ಮೆಂಟ್‌ ನಿಲ್ದಾಣ ದೂರವಾಗುತ್ತದೆ. ರೈಲು, ಮೆಟ್ರೊ ರೈಲು ಮತ್ತು ಆಟೊ ನಿಲ್ದಾಣ ಒಂದೇ ಕಡೆಗೆ ಇದ್ದರೆ ಅಥವಾ ಸಂಪರ್ಕ ಸುಲಭವಾಗಿದ್ದರೆ ಜನರಿಗೆ ಅನುಕೂಲ. ಈ ಉದ್ದೇಶದಿಂದ ಪಾದಚಾರಿ ಮೇಲ್ಸೇತುವೆಗಾಗಿ ಹೋರಾಟ ಮಾಡಿದ್ದೆವು. ಈಗ ನಿಗಮ ಒಪ್ಪಿದೆ’ ಎಂದು ‘ಸಿಟಿಜನ್ಸ್ ಫಾರ್‌ ಸಿಟಿಜನ್ಸ್’ ವೇದಿಕೆಯ ಸಂಚಾಲಕ ರಾಜಕುಮಾರ್‌ ದುಗರ್‌ ಹೇಳಿದರು.

ಸುರಂಗ ಬದಲು ಮೇಲ್ಸೇತುವೆ: ನ್ಯೂ ಬಂಬೂಬಜಾರ್‌ ಬಳಿ ಮೆಟ್ರೊ ನೆಲದಡಿ ನಿಲ್ದಾಣ ನಿರ್ಮಾಣ ವಾಗುತ್ತಿರುವುದರಿಂದ, ಸುರಂಗದ ಮೂಲಕವೇ ಕಂಟೋನ್ಮೆಂಟ್ ನಿಲ್ದಾಣ ಸಂಪರ್ಕಿಸಲು ಯೋಚಿಸಲಾಗಿತ್ತು. ಆದರೆ, ದೊಡ್ಡ ಬಂಡೆ ಹಾಗೂ ಮರಗಳು ಅಡ್ಡ ಬರುವುದರಿಂದ ಕಾಮಗಾರಿಗೆ ಅಡ್ಡಿಯಾಗುತ್ತಿತ್ತು. ಅಲ್ಲದೆ, ಸಮಯ ಮತ್ತು ವೆಚ್ಚ ಜಾಸ್ತಿ ಆಗುತ್ತಿದ್ದುದರಿಂದ ಈ ಮಾರ್ಗದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದರು.

ADVERTISEMENT

ಎಲ್ಲಿಂದ ಎಲ್ಲಿಗೆ ?: ಈಗ ಬಂಬೂ ಬಜಾರ್‌ನ ಮಸೀದಿ ಬಳಿ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಮಸೀದಿ ಬಳಿ ಜಾಗ ಖರೀದಿಸಿ, ಅಲ್ಲಿಂದ ಪಾದಚಾರಿ ಮೇಲ್ಸೇತುವೆ ನಿರ್ಮಾಣ
ವನ್ನು ನಿಗಮ ಕೈಗೆತ್ತಿಕೊಳ್ಳಲಿದೆ. ಪೆಟ್ರೋಲ್‌ ಬಂಕ್‌ ಬಳಿಯವರೆಗೆ ಸಾಗಿ, ಅಲ್ಲಿಂದ ಕಂಟೋನ್ಮೆಂಟ್‌ ನಿಲ್ದಾಣದ ಪ್ರವೇಶ ದ್ವಾರದ ಕಡೆಗೆ ತಿರುಗುತ್ತದೆ. ರೈಲ್ವೆ ಇಲಾಖೆಯು ನಿಲ್ದಾಣದ ಬಲಗಡೆ ಹೊಸ ಪ್ಲಾಟ್‌ಫಾರಂ ಮಾಡುವ ಸಾಧ್ಯತೆಯಿದ್ದು, ಈ ಮೇಲ್ಸೇತುವೆಯೂ ಆ ಪ್ಲಾಟ್‌ ಫಾರಂ ಅನ್ನು ಸಂಪರ್ಕಿಸಲಿದೆ. ಸದ್ಯ, ರೈಲ್ವೆ ನಿಲ್ದಾಣದ ಸುತ್ತಲಿನ ಗೋಡೆಯ ಮೇಲೆ, ರಸ್ತೆಯಿಂದ
ಎಂಟು ಮೀಟರ್‌ ಎತ್ತರದಲ್ಲಿ ಈ ಪಾದಚಾರಿ ಮೇಲ್ಸೇತುವೆ ನಿರ್ಮಾಣ
ಗೊಳ್ಳಲಿದೆ.

ಟ್ರಾವೆಲೇಟರ್‌ ಕಷ್ಟ: ನ್ಯೂ ಬಂಬೂ ಬಜಾರ್‌ನಿಂದ ಕಂಟೋನ್ಮೆಂಟ್‌ವರೆಗೆ ಅಂದಾಜು ಒಂದು ಕಿ.ಮೀ. ಆಗುತ್ತದೆ. ಲಗೇಜ್‌ ಹೊತ್ತುಕೊಂಡು ನಡೆಯುವುದು ಪ್ರಯಾಣಿಕರಿಗೆ ಕಷ್ಟವಾಗಬಹುದು. ಆದ್ದರಿಂದ ಮೇಲ್ಸೇತುವೆ ಮೇಲೆ ಟ್ರಾವೆಲೇಟರ್‌ (ಎಸ್ಕಲೇಟರ್‌ ಮಾದರಿ ಸಾಧನ) ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

‘ಪಾದಚಾರಿ ಮೇಲ್ಸೇತುವೆಯ ಎರಡೂ ಬದಿಯಲ್ಲಿ ಎಸ್ಕಲೇಟರ್‌ ಸೌಲಭ್ಯ ಒದಗಿಸಲಾಗುವುದು. ಜಾಗದ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದ ಟ್ರಾವೆಲೇಟರ್‌ ಸೌಲಭ್ಯ ಒದಗಿಸುವುದು ಕಷ್ಟವಾಗಬಹುದು. ಆದರೂ,ಟ್ರಾವೆಲೇಟರ್‌ ಅಗತ್ಯದ ಕುರಿತು ಅಧ್ಯಯನ ನಡೆಸಲಾಗುವುದು’ ಎಂದು ಸೇಠ್‌ ಹೇಳಿದರು.

ವಿಸ್ತರಣೆಗೆ ಮನವಿ

ಕಂಟೋನ್ಮೆಂಟ್‌ ನಿಲ್ದಾಣದ ಮತ್ತೊಂದು ಬದಿಯಲ್ಲಿರುವ ವಸಂತನಗರದಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆ ಹಾಗೂ ಹೋಟೆಲ್‌ಗಳಿವೆ. ಮೆಟ್ರೊ ರೈಲು ಬಳಕೆದಾರರೂ ಹೆಚ್ಚಲಿದ್ದಾರೆ. ವಸಂತನಗರದ ಜಂಕ್ಷನ್‌ವರೆಗೆ ಮೇಲ್ಸೇತುವೆ ವಿಸ್ತರಿಸಿದರೆ ಅನುಕೂಲ ಎಂದು ರಾಜಕುಮಾರ್‌ ಮನವಿ ಮಾಡಿದರು.

‘ಈ ಕುರಿತು ಬಿಬಿಎಂಪಿ ಜೊತೆಗೆ ಮಾತನಾಡಲಾಗುವುದು. ಆದರೆ, ವಸಂತನಗರದಲ್ಲಿ ಮುಕ್ತಾಯ ಮಾಡುವ (ಲ್ಯಾಂಡಿಂಗ್‌) ಸ್ಥಳವನ್ನು ಗುರುತಿಸಬೇಕಾಗಿದೆ’ ಎಂದು ಸೇಠ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.