ADVERTISEMENT

ಗೊಟ್ಟಿಗೆರೆ–ನಾಗವಾರ ಮಾರ್ಗ l ಶೀಘ್ರ ಮೆಟ್ರೊ ಸುರಂಗ ಕಾಮಗಾರಿ

ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಅಂಗೀಕಾರ ಪತ್ರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 20:18 IST
Last Updated 7 ನವೆಂಬರ್ 2019, 20:18 IST
.
.   

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ಗೊಟ್ಟಿಗೆರೆ–ನಾಗವಾರ ಸುರಂಗ ಮಾರ್ಗದ (ಲೇನ್‌ 6) ಪ್ಯಾಕೇಜ್‌–1 ಮತ್ತು ಪ್ಯಾಕೇಜ್‌– 4ರ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಗುತ್ತಿಗೆ ಸಂಸ್ಥೆಗಳಿಗೆ ಅಂಗೀಕಾರ ಪತ್ರ ನೀಡಿದೆ.

ಈ ಎರಡೂ ಪ್ಯಾಕೇಜ್‌ಗಳಲ್ಲಿ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಬಳಸಿ ಮಾರ್ಗ ನಿರ್ಮಿಸಬೇಕಾಗಿದೆ. ಟಿಬಿಎಂ ಅಳವಡಿಕೆಗೆ ಹಾಗೂ ಇತರ ಭೌತಿಕ ಕಾಮಗಾರಿಗಳಿಗೆ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ, ಸುರಂಗ ಕೊರೆಯುವ ಕಾಮಗಾರಿಗಳು ಎರಡೂವರೆ ತಿಂಗಳ ಬಳಿಕ ಆರಂಭವಾಗಲಿವೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಮುಂಬೈನ ಎಎಫ್‌ಕಾನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಸಂಸ್ಥೆ ಪ್ಯಾಕೇಜ್‌–1ರ ಕಾಮಗಾರಿಯ ಗುತ್ತಿಗೆ ಪಡೆದಿದೆ. ಈ ಕಾಮಗಾರಿಯ ದಕ್ಷಿಣ ಭಾಗದ ರ‍್ಯಾಂಪ್‌ ಸ್ವಾಗತ್‌ ಕ್ರಾಸ್‌ನ ಎತ್ತರಿಸಿದ ಮಾರ್ಗದ ನಿಲ್ದಾಣದಿಂದ ವೆಲ್ಲಾರ ಜಂಕ್ಷನ್‌ ಸುರಂಗ ಮಾರ್ಗದ ನಿಲ್ದಾಣದವರೆಗಿನ ಮಾರ್ಗದ ಕಾಮಗಾರಿಯನ್ನು ಒಳಗೊಂಡಿದೆ. ಸುರಂಗ ಮಾರ್ಗದ ಜತೆಗೆ ಡೇರಿ ವೃತ್ತ, ಮೈಕೋ ಇಂಡಸ್ಟ್ರೀಸ್‌ ಹಾಗೂ ಲ್ಯಾಂಗ್‌ಫರ್ಡ್‌ ಟೌನ್‌ ನೆಲದಾಳದ ನಿಲ್ದಾಣಗಳ ನಿರ್ಮಾಣವೂ ಇದರ ವ್ಯಾಪ್ತಿಯಲ್ಲಿ ಬರಲಿವೆ.

ADVERTISEMENT

ಪ್ಯಾಕೇಜ್‌–4ರ ಕಾಮಗಾರಿಯ ಗುತ್ತಿಗೆಯನ್ನು ಕೋಲ್ಕತ್ತ ಮೆ.ಐಟಿಡಿ ಸಿಮೆಂಟೇಷನ್‌ ಇಂಡಿಯಾ ಲಿಮಿಟೆಡ್‌ಸಂಸ್ಥೆಗೆ ನೀಡಲಾಗಿದೆ. ಸುರಂಗ ಮಾರ್ಗದಲ್ಲಿ ಟ್ಯಾನರಿ ರಸ್ತೆ ನಿಲ್ದಾಣದಿಂದ ನಾಗವಾರ ನಿಲ್ದಾಣದವರೆಗಿನ ಕಾಮಗಾರಿಯನ್ನುಈ ಸಂಸ್ಥೆ ನಿರ್ವಹಿಸಲಿದೆ. ಸುರಂಗ ಮಾರ್ಗದಲ್ಲಿ ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್‌ ಕಾಲೇಜು ಮತ್ತು ನಾಗವಾರ ನಿಲ್ದಾಣಗಳನ್ನು ಸಂಸ್ಥೆ ನಿರ್ಮಿಸಲಿದೆ.

**

ಅಂಕಿ ಅಂಶ
3.65 ಕಿ.ಮೀ:ಪ್ಯಾಕೇಜ್‌–1ರಲ್ಲಿ ನಿರ್ಮಾಣವಾಗುವ ಮಾರ್ಗದ ಉದ್ದ
₹ 1526.33 ಕೋಟಿ:ಪ್ಯಾಕೇಜ್‌–1 ಕಾಮಗಾರಿಯ ವೆಚ್ಚ
4.591 ಕಿ.ಮೀ:ಪ್ಯಾಕೇಜ್‌–4ರಲ್ಲಿ ನಿರ್ಮಾಣವಾಗುವ ಮಾರ್ಗದ ಉದ್ದ
₹ 1771.25 ಕೋಟಿ:ಪ್ಯಾಕೇಜ್‌–4ರ ಕಾಮಗಾರಿಯ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.