ADVERTISEMENT

ಪೇಟಿಎಂ, ಯಾತ್ರಾ ಆ್ಯಪ್‌ನಲ್ಲೂ ಮೆಟ್ರೊ ಟಿಕೆಟ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 19:34 IST
Last Updated 7 ಡಿಸೆಂಬರ್ 2022, 19:34 IST
   

ಬೆಂಗಳೂರು: ಮೆಟ್ರೊ ರೈಲು ಪ್ರಯಾಣಿಕರು ಇನ್ನು ಪೇಟಿಎಂ ಮತ್ತು ಯಾತ್ರಾ ಮೊಬೈಲ್‌ ಆ್ಯಪ್‌ನಲ್ಲೂ ಕ್ಯೂಆರ್‌ ಕೋಡ್ ಟಿಕೆಟ್ ಖರೀದಿಸಬಹುದು. ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಬಿಎಂಆರ್‌ಸಿಎಲ್‌, ಗುರುವಾರದಿಂದ(ಡಿ.8) ಜಾರಿಗೆ ತರುತ್ತಿದೆ.

ಕ್ಯೂಆರ್‌ ಕೋಡ್ ಟಿಕೆಟ್ ವ್ಯವಸ್ಥೆಯನ್ನು ನವೆಂಬರ್ 1ರಿಂದ ಪರಿಚಯಿಸಿದ್ದ ಬಿಎಂಆರ್‌ಸಿಎಲ್, ಅದನ್ನು ‘ನಮ್ಮ ಮೆಟ್ರೊ’ ಮೊಬೈಲ್ ಆ್ಯಪ್‌ನಲ್ಲಿ ಖರೀದಿಸಲು ಅವಕಾಶ ಕಲ್ಪಿಸಿತ್ತು. ಈಗ ಅದನ್ನು ಪೇಟಿಎಂ ಮತ್ತು ಯಾತ್ರಾ ಆ್ಯಪ್‌ಗೂ ವಿಸ್ತರಿಸಿದೆ.

ಮೊಬೈಲ್ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ನೋಂದಾಯಿಸಿಕೊಳ್ಳಬೇಕು. ಪ್ರಯಾಣದ ದಿನದಂದು ಪ್ರವೇಶ ಮತ್ತು ನಿರ್ಗಮನ ನಿಲ್ದಾಣಗಳನ್ನು ನಿಗದಿಪಡಿಸಿ ಕ್ಯೂಆರ್‌ ಕೋಡ್ ಟಿಕೆಟ್ ಖರೀದಿಸಬಹುದು. ನಿಲ್ದಾಣಗಳಲ್ಲಿ ಇರುವ ಸ್ವಯಂ ಚಾಲಿತ ಪ್ರವೇಶ ದ್ವಾರಗಳ ಬಳಿ ಇರಿಸಿರುವ ಕ್ಯೂಆರ್‌ ಕೋಡ್ ರೀಡರ್‌ಗಳಿಗೆ ಮೊಬೈಲ್ ಫೋನ್‌ನಲ್ಲಿರುವ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡಿ ಪ್ರವೇಶಿಸಬಹುದು ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಖರೀದಿಸಿದ ಮೊಬೈಲ್ ಕ್ಯೂಆರ್ ಕೋಡ್‌ ಟಿಕೆಟ್‌ ಆ ದಿನದ ರೈಲು ಸೇವೆ ಕೊನೆಗೊಳ್ಳುವ ತನಕ ಚಾಲ್ತಿಯಲ್ಲಿ ಇರಲಿದೆ. ಟಿಕೆಟ್ ಖರೀದಿಸಿದ ಬಳಿಕ ಪ್ರಯಾಣಿಸದಿರಲು ನಿರ್ಧರಿಸಿದರೆ, ಅದೇ ದಿನ ಟಿಕೆಟ್ ರದ್ದುಗೊಳಿಸಿ ಮೊತ್ತ ವಾಪಸ್ ಪಡೆಯಲು ಅವಕಾಶ ಇದೆ. ಕ್ಯೂಆರ್ ಕೋಡ್ ಟಿಕೆಟ್‌ ಖರೀದಿಸುವವರಿಗೆ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.