ADVERTISEMENT

ಮೆಟ್ರೊ ಸ್ಮಾರ್ಟ್‌ಕಾರ್ಡ್‌: ಕರ್ನಾಟಕ ಒನ್‌ನಲ್ಲಿಯೂ ರಿಚಾರ್ಜ್ ಸೌಲಭ್ಯ

ಸ್ಮಾರ್ಟ್‌ಕಾರ್ಡ್‌ ಬಳಕೆ ಗಡುವು 7 ದಿನಗಳಿಂದ 60 ದಿನಗಳಿಗೆ ಏರಿಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 12:18 IST
Last Updated 15 ಅಕ್ಟೋಬರ್ 2020, 12:18 IST
ಸ್ಮಾರ್ಟ್‌ಕಾರ್ಡ್ ಬಳಕೆ
ಸ್ಮಾರ್ಟ್‌ಕಾರ್ಡ್ ಬಳಕೆ   

ಬೆಂಗಳೂರು: ‘ನಮ್ಮ ಮೆಟ್ರೊ’ ಸ್ಮಾರ್ಟ್‌ಕಾರ್ಡ್‌ಗಳನ್ನು ಕರ್ನಾಟಕ ಮೊಬೈಲ್‌ ಒನ್ ಆ್ಯಪ್‌ ಮೂಲಕವೂ ರಿಚಾರ್ಜ್‌ ಮಾಡಿಸಿಕೊಳ್ಳುವ ಸೌಲಭ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನೀಡಿದೆ.

ಸ್ಮಾರ್ಟ್‌ಕಾರ್ಡ್‌ಗಳ ಮೂಲಕ ಮಾತ್ರ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಲು ಅನುಮತಿ ನೀಡಿರುವುದರಿಂದ ಈ ಕಾರ್ಡ್‌ಗಳ ರಿಚಾರ್ಜ್‌ ಮಾಡಿಸುವ ವೇಳೆಯಲ್ಲಿ ಗ್ರಾಹಕರಿಗೆ ತೊಂದರೆಯಾಗುತ್ತಿತ್ತು. ನಿಗಮದ ವೆಬ್‌ಸೈಟ್‌ ಮತ್ತು ‘ನಮ್ಮ ಮೆಟ್ರೊ’ ಆ್ಯಪ್‌ ಮೂಲಕ ರಿಚಾರ್ಜ್‌ಗೆ ಅವಕಾಶ ಇದೆ. ಅದರೊಂದಿಗೆ ಈಗ ಈ ಕರ್ನಾಟಕ ಮೊಬೈಲ್‌ ಒನ್‌ ಸೇವಾ ಕೇಂದ್ರದ ಮೂಲಕವೂ ರಿಚಾರ್ಜ್‌ ಮಾಡಿಸಿಕೊಳ್ಳಬಹುದಾಗಿದೆ.

ಈ ಸಂಪರ್ಕರಹಿತ ವಿಧಾನಗಳಿಂದ ಟಾಪ್‌ ಮಾಡಿದ ಸ್ಮಾರ್ಟ್‌ಕಾರ್ಡ್‌ಗಳನ್ನು ಯಾವುದೇ ಮೆಟ್ರೊ ನಿಲ್ದಾಣದ ಸ್ವಯಂಚಾಲಿತ ಪ್ರವೇಶದ್ವಾರದಲ್ಲಿ ಏಳು ದಿನಗಳೊಳಗಾಗಿ ಪ್ರಸ್ತುತಪಡಿಸಬೇಕು. ಏಳು ದಿನಗಳೊಳಗೆ ಕಾರ್ಡ್‌ ಬಳಸದಿದ್ದಲ್ಲಿ, ಸ್ಮಾರ್ಟ್‌ಕಾರ್ಡ್‌ ಮತ್ತು ಪಾವತಿಸಲಾದ ಮೊತ್ತದ ದಾಖಲೆ ಅಥವಾ ಪುರಾವೆಯೊಂದಿಗೆ ಟಾಪ್‌–ಅಪ್‌ ಮಾಡಲಾದ 60 ದಿನಗಳೊಳಗೆ ಯಾವುದೇ ಮೆಟ್ರೊ ನಿಲ್ದಾಣದ ಗ್ರಾಹಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ಕೇಂದ್ರದ ಸಿಬ್ಬಂದಿಯು ಇದನ್ನು ಪರಿಶೀಲಿಸಿ, ಸಂಬಂಧಿಸಿದ ಸ್ಮಾರ್ಟ್‌ಕಾರ್ಡ್‌ಗೆ ಟಾಪ್‌ಅಪ್‌ ಮಾಡಲಾದ ಮೊತ್ತವನ್ನು ಜಮಾ ಮಾಡುತ್ತಾರೆ ಎಂದು ನಿಗಮ ಹೇಳಿದೆ.

ADVERTISEMENT

ಈ ಮೊದಲು, ಏಳು ದಿನಗಳೊಳಗೆ ಸ್ಮಾರ್ಟ್‌ಕಾರ್ಡ್‌ ಬಳಕೆ ಮಾಡದಿದ್ದಲ್ಲಿ, ಆ ಮೊತ್ತವು ಸ್ಮಾರ್ಟ್‌ಕಾರ್ಡ್‌ಗೆ ಜಮಾ ಆಗುತ್ತಲೇ ಇರಲಿಲ್ಲ. ಈಗ, ಟಾಪ್ಅಪ್‌ ಮಾಡಿದ 60 ದಿನಗಳೊಳಗಾಗಿ ಸ್ಮಾರ್ಟ್‌ಕಾರ್ಡ್‌ಗಳನ್ನು ಯಾವುದೇ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ರಸ್ತುತಪಡಿಸದಿದ್ದರೆ ಮಾಡಿದಂತಹ ವಹಿವಾಟು ರದ್ದಾಗುತ್ತದೆ ಎಂದು ನಿಗಮ ಹೇಳಿದೆ.

ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ, ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪ್ರಯಾಣಿಕರು ಗ್ರಾಹಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.