ADVERTISEMENT

ಕಸದ ಗುಂಡಿಯಲ್ಲಿ ಸಿಲುಕಿದ ಟಿಬಿಎಂ ರುದ್ರ: ಮೆಟ್ರೊ ರೈಲು ಸುರಂಗ ಕಾಮಗಾರಿಗೆ ತೊಡಕು

ಗೊಟ್ಟಿಗೆರೆ–ನಾಗವಾರ ಮೆಟ್ರೊ ರೈಲು ಮಾರ್ಗದ ಸುರಂಗ ಕಾಮಗಾರಿಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 4:26 IST
Last Updated 9 ಅಕ್ಟೋಬರ್ 2022, 4:26 IST
ಬನ್ನೇರುಘಟ್ಟ ರಸ್ತೆಯಲ್ಲಿ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿರುವುದು –ಪ್ರಜಾವಾಣಿ ಚಿತ್ರ/ರಂಜು ಪಿ.
ಬನ್ನೇರುಘಟ್ಟ ರಸ್ತೆಯಲ್ಲಿ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿರುವುದು –ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ಮೆಟ್ರೊ ರೈಲು ಮಾರ್ಗದ ಸುರಂಗ ಕೊರೆಯುವ ಕಾಮಗಾರಿಗೆ ಹಳೇ ಕಸದ ರಾಶಿಯೊಂದು ಅಡ್ಡಿಯಾಗಿದೆ. ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ಸುರಂಗ ಕೊರೆಯುತ್ತಿರುವ ಟಿಬಿಎಂ(ಸುರಂಗ ಕೊರೆಯುವ ಯಂತ್ರ) ‘ರುದ್ರ’ ಕಸದ ರಾಶಿಯಲ್ಲಿ ಸಿಲುಕಿಕೊಂಡಿದೆ.

ಈ ಮಾರ್ಗದಲ್ಲಿ ಡೈರಿ ವೃತ್ತದಿಂದ ನಾಗವಾರ ತನಕ 14 ಕಿಲೋ ಮೀಟರ್ ಸುರಂಗ ಮಾರ್ಗ ಕೊರೆಯಲಾಗುತ್ತಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಡೈರಿ ವೃತ್ತದಿಂದ ಲಕ್ಕಸಂದ್ರ ಕಡೆಗೆ 33 ಅಡಿ ಆಳದಲ್ಲಿ ಸುರಂಗ ಕೊರೆಯುತ್ತಿರುವ ‘ರುದ್ರ’ ಯಂತ್ರಕ್ಕೆ ಕಸದ ಗುಡ್ಡೆಯೊಂದು ಎದುರಾಗಿದೆ. ಹಳೇ ಚಪ್ಪಲಿಗಳು, ಪ್ಲಾಸ್ಟಿಕ್ ಖಾಲಿ ಚೀಲಗಳು, ಬಕೆಟ್‌ ಚೂರುಗಳು, ರಬ್ಬರ್ ಟೈರ್‌ಗಳು, ಮೂಳೆಗಳು ಯಂತ್ರಕ್ಕೆ ಸಿಲುಕಿಕೊಂಡಿವೆ.

ಯಂತ್ರದ ಕಾರ್ಯನಿರ್ವಹಣೆಗೆ ತೊಡಕಾದಾಗ ಕಟ್ಟರ್ ಹೆಡ್‌ಗಳ ಮೂಲಕ ನೋಡಿದ ಸಿಬ್ಬಂದಿಗೆ ಕಸದ ರಾಶಿ ಇರುವುದು ಗೊತ್ತಾಗಿದೆ. ಬಂಡೆ ಅಥವಾ ಮಣ್ಣನ್ನು ಸರಾಗವಾಗಿ ಸೀಳುವ ಸುರಂಗ ಕೊರೆಯುವ ಯಂತ್ರಕ್ಕೆ ರಬ್ಬರ್ ಟೈರ್‌ಗಳು ಅಡ್ಡಿಯಾಗುತ್ತಿವೆ. ಮೆಟ್ರೊ ಸುರಂಗ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ಕಸದ ರಾಶಿ ಎದುರಾಗಿದ್ದು, ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ. ಯಂತ್ರ ಸಾಗುವ ವೇಗಕ್ಕೂ ಅಡ್ಡಿಯಾಗಿದ್ದು, ಸರಿಪಡಿಸಲು ಸಿಬ್ಬಂದಿ ಸಾಹಸ ಮುಂದುವರಿಸಿದ್ದಾರೆ.

ADVERTISEMENT

1980ರ ದಶಕದಲ್ಲಿ ಈ ಜಾಗ ಕಲ್ಲುಗಣಿಗಾರಿಕೆ ಪ್ರದೇಶವಾಗಿದ್ದು, ಆ ಜಾಗವನ್ನು ಅಂದಿನ ನಗರ ಸ್ಥಳೀಯ ಸಂಸ್ಥೆ ಕಸ ಸುರಿಯುವ ತಾಣವಾಗಿ ಮಾಡಿಕೊಂಡಿತ್ತು. ನಗರ ಬೆಳೆದಂತೆ ಕಸ ಸುರಿಯುವುದು ನಿಲ್ಲಿಸಲಾಗಿದ್ದು, ಅದರ ಮೇಲೆ ಮರಳು ಮತ್ತು ಮಣ್ಣು ಸುರಿದು ತಾತ್ಕಾಲಿಕ ಕಟ್ಟಡಗಳನ್ನೂ ಜನ ನಿರ್ಮಿಸಿಕೊಂಡಿದ್ದಾರೆ.

ಯಂತ್ರ ಸಿಲುಕಿರುವ ಸ್ಥಳದಿಂದ ಸುಮಾರು 40 ಮೀಟರ್ ತನಕ ಕಸದ ರಾಶಿ ಇರಬಹುದು ಎಂದು ಸಿಬ್ಬಂದಿ ಅಂದಾಜಿಸಿದ್ದಾರೆ. ಸುರಂಗ ಕೊರೆಯುವಾಗ ಕಸ ಕುಸಿದು ಮೇಲ್ಭಾಗದ ತಾತ್ಕಾಲಿಕ ಕಟ್ಟಡಗಳಿಗೂ ಹಾನಿಯಾಗುವ ಸಾಧ್ಯತೆ ಇದ್ದು, ಸುರಕ್ಷತೆ ದೃಷ್ಟಿಯಿಂದ ಈ ಜಾಗದ ಮೇಲ್ಭಾಗದಲ್ಲಿರುವ ತಾತ್ಕಾಲಿಕ ಕಟ್ಟಡಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಅವರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

‘ಕಾಮಗಾರಿ ಮುಂದುವರಿಸಲು ಕ್ರಮ’

ಸುರಂಗ ಕೊರೆಯುವ ಕಾಮಗಾರಿ ಮುಂದುವರಿಸಲು ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದರು.

ಕಸ ಅಥವಾ ಇನ್ನಾವುದೇ ವಸ್ತುಗಳು ಸುರಂಗಕ್ಕೆ ಕುಸಿಯದಂತೆ ತಡೆ ಕಂಬಗಳನ್ನು ನಿರ್ಮಿಸಿ ಸುರಂಗ ಕೊರೆಯುವ ಕಾಮಗಾರಿ ಮುಂದುವರಿಸಲಾಗುವುದು ಎಂದರು.

ಈ ಎಲ್ಲಾ ಸುರಕ್ಷತಾ ಕ್ರಮಗಳಿಗೆ ಸಮಯ ಬೇಕಾಗಲಿದ್ದು, ಸುರಂಗ ಕಾಮಗಾರಿ ನಿಗದಿಗಿಂತ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.