ADVERTISEMENT

ಮೆಟ್ರೊ: ಒಂದು ಕಿ.ಮೀ ಸ್ಕೈವಾಕ್

ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಿಂದ ಯಶವಂತಪುರ ಬಿಎಂಟಿಸಿ ನಿಲ್ದಾಣಕ್ಕೆ ಸಂಪರ್ಕ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:30 IST
Last Updated 12 ಜುಲೈ 2019, 19:30 IST
   

ಬೆಂಗಳೂರು: ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೊ ನಿಲ್ದಾಣದಿಂದ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಒಂದು ಕಿ.ಮೀ ಉದ್ದದ ಸ್ಕೈವಾಕ್ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಪ್ರಸ್ತಾವ ಸಿದ್ಧಪಡಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಬಳಿ ಇರುವ ಪಾದಚಾರಿ ಮೇಲ್ಸೇತುವೆಗೂ ಇದನ್ನು ಸಂಪರ್ಕಿಸಲು ಉದ್ದೇಶಿಸಲಾಗಿದೆ.

‘ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೊ ನಿಲ್ದಾಣದಿಂದ ಯಶವಂತ ಪುರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸ್ಕೈವಾಕ್‌ ನಿರ್ಮಿಸು ತ್ತೇವೆ. ಅಲ್ಲಿಂದ ಸಿ.ವಿ. ರಾಮನ್ ರಸ್ತೆಯಲ್ಲಿರುವ ಪಾದಚಾರಿ ಮೇಲ್ಸೇತುವೆಗೆ ಸಂ‍ಪರ್ಕ ಕಲ್ಪಿಸುತ್ತೇವೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದರು‌.

‘ಪ್ರಯಾಣಿಕರು ತ್ರಿವೇಣಿ ಮುಖ್ಯ ರಸ್ತೆ ಮ‌ತ್ತು ರಾಮಯ್ಯ ರಸ್ತೆಯಲ್ಲಿ ಪಾದಚಾರಿ ಗಳು ಇಳಿಯಲು ಈ ಸ್ಕೈವಾಕ್‌ನಲ್ಲಿ ಅವಕಾಶ ಕಲ್ಪಿಸಲಾಗುವುದು.ಸ್ಕೈವಾಕ್ ನಿರ್ಮಿ ಸಲು ಉದ್ದೇಶಿಸಿರುವ ರಸ್ತೆ ಅತ್ಯಂತ ಕಿರಿದಾಗಿದ್ದು, ಶೀಘ್ರವೇ ಕಾರ್ಯ ಸಾಧ್ಯತಾ ಅಧ್ಯಯನ ನಡೆಯಲಿದೆ’ ಎಂದರು.

ADVERTISEMENT

ಯಶವಂತಪುರ ಬಸ್ ನಿಲ್ದಾಣಕ್ಕೆ ರೈಲು ನಿಲ್ದಾಣ ಮತ್ತು ಮೆಟ್ರೊ ನಿಲ್ದಾಣಕ್ಕೆ ನೇರ ಸಂಪರ್ಕ ಇಲ್ಲದಿರುವುದೇ ಪ್ರಯಾಣಿಕರಿಗೆ ದೊಡ್ಡ ಸಮಸ್ಯೆಯಾಗಿದೆ.‘ಬಸ್ ನಿಲ್ದಾಣದಿಂದ ಮೆಟ್ರೊ ನಿಲ್ದಾಣಕ್ಕೆ ತೆರಳಲು ಕನಿಷ್ಠ ಅರ್ಧ ಗಂಟೆ ಬೇಕಾಗುತ್ತಿದೆ. ವಾಹನ ದಟ್ಟಣೆ ಇರುವ ತುಮಕೂರು ರಸ್ತೆಯನ್ನು ದಾಟುವುದು ಪ್ರಯಾಸದ ಕೆಲಸ. ದಟ್ಟಣೆ ಅವಧಿಯಲ್ಲಂತೂ ರಸ್ತೆ ದಾಟಲು ಸಾಧ್ಯವೇ ಇಲ್ಲ’ ಎಂದು ಎಂಜಿನಿಯರಿಂಗ್ ವಿದ್ಯಾರ್ಥಿ ಆರ್.ಕೆ. ಗಿರಿಧರ್ ಹೇಳಿದರು.

ಯಶವಂತಪುರ ರೈಲು ನಿಲ್ದಾಣದ 6ನೇ ಪ್ಲಾಟ್‌ಫಾರಂನಿಂದ ಯಶವಂತಪುರ ಮೆಟ್ರೊ ನಿಲ್ದಾಣಕ್ಕೆ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ನೈರುತ್ಯ ರೈಲ್ವೆಯ ಅನುಮತಿಗಾಗಿ ಬಿಎಂಆರ್‌ಸಿಎಲ್ ಕಾಯುತ್ತಿದೆ. ‘ಅನುಮತಿ ನೀಡಿದ ಕೂಡಲೇ ಕೆಲಸ ಆರಂಭಿಸುತ್ತೇವೆ’ ಎಂದುನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.