ADVERTISEMENT

ಬಿಎಂಟಿಸಿ: ‘ರಜೆ ನೀಡಲು ಶವದ ಫೋಟೋ ಬೇಕಂತೆ’

ಸುಮನಹಳ್ಳಿ ಡಿಪೊದಲ್ಲಿ ಬಿಎಂಟಿಸಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 19:35 IST
Last Updated 28 ಫೆಬ್ರುವರಿ 2019, 19:35 IST
ಡಿಪೊದಲ್ಲಿ ಬಿಎಂಟಿಸಿ ನೌಕರರು ಪ್ರತಿಭಟನೆ
ಡಿಪೊದಲ್ಲಿ ಬಿಎಂಟಿಸಿ ನೌಕರರು ಪ್ರತಿಭಟನೆ   

ಬೆಂಗಳೂರು: ‘ಡಿಪೊ–31ರ ವ್ಯವಸ್ಥಾಪಕರು, ಸಂಚಾರ ನಿರೀಕ್ಷಕರು ವಿನಾ ಕಾರಣ ನಮಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರು ಸುಮನಹಳ್ಳಿ ಜಂಕ್ಷನ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದರಿಂದ 80ಕ್ಕೂ ಹೆಚ್ಚು ಬಸ್‌ಗಳ ಸೇವೆ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದರು.

ಕಂಡಕ್ಟರ್ ಜ್ಯೋತಿ ಅವರು ಪ್ರತಿಭಟನಾ ಸ್ಥಳದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆ ನಂತರ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಯಿತು.

‘ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದರೂ ರಜೆ ಕೊಡಲು ತಕರಾರು ಮಾಡುತ್ತಾರೆ. ಸಂಬಂಧಿಗಳು ಅಥವಾ ಕುಟುಂಬದ ಆಪ್ತರು ಮೃತಪಟ್ಟರೂ ರಜೆ ಕೊಡುವುದಿಲ್ಲ. ಶವದ ಫೋಟೊ ತೋರಿಸಿದರೆ ಮಾತ್ರ ರಜೆ ಮಂಜೂರು ಮಾಡುವುದಾಗಿ ಹೇಳುತ್ತಾರೆ. ಎಷ್ಟೋ ಸಲ ಸಾವಿನ ಮನೆಗೆ ಹೋಗಿ ಸೆಲ್ಫಿ ತೆಗೆದು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿರುವ ಉದಾಹರಣೆಗಳೂ ಇವೆ. ಇಂತಹ ದಬ್ಬಾಳಿಕೆ ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ADVERTISEMENT

‘ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಡುವ ಕಾರ್ಮಿಕರನ್ನು ಮಾತ್ರ ಬೆಂಬಲಿಸುವ ವ್ಯವಸ್ಥಾಪಕರು, ಆ ಕಾರ್ಮಿಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ. ಅವರು ಕೇಳಿದ ಮಾರ್ಗಗಳನ್ನು ನೀಡುತ್ತಾರೆ. ‘ಸದ್ಯದಲ್ಲೇ ನಾನು ದೊಡ್ಡ ಹುದ್ದೆಗೆ ಹೋಗುತ್ತೇನೆ. ಆಗ ನಿಮಗೆಲ್ಲ ಗ್ರಹಚಾರ ಬಿಡಿಸುತ್ತೇನೆ’ ಎಂದು ನಮಗೆ ಬೆದರಿಸುತ್ತಾರೆ. ಇವರ ಕಾಟ ಎಷ್ಟು ದಿನ ಸಹಿಸಿಕೊಳ್ಳುವುದು. ಈ ಕಿರುಕುಳದಿಂದ ನಮಗೆ ತಕ್ಷಣವೇ ಮುಕ್ತಿ ಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ನೌಕರರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ ವ್ಯವಸ್ಥಾಪಕ ನಿರ್ದೇಶಕರು, ‘ಪ್ರತಿಭಟನೆ ಹೆಸರಿನಲ್ಲಿ ಪ್ರಯಾಣಿಕರಿಗೆ ತೊಂದರೆ ಮಾಡಬೇಡಿ. ಆದಷ್ಟು ಬೇಗ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ. ಏನೇ ಇದ್ದರೂ ಕಚೇರಿಗೆ ಬಂದು ಮಾತನಾಡಿ’ ಎಂದರು. ಆ ನಂತರ ನೌಕರರು ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.