ADVERTISEMENT

ಬಿಎಂಟಿಸಿ ಆ್ಯಪ್‌: ನಿಧಾನಗತಿ ಕಾರ್ಯವೈಖರಿ; ಬಳಕೆದಾರರಿಗೆ ಕಿರಿಕಿರಿ

ಬಸ್‌ ಬಾರದಿದ್ದರೂ ಆಗಲೇ ಹೋಗಿದೆ ಎಂದು ಮಾಹಿತಿ ನೀಡುತ್ತದೆ!

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:30 IST
Last Updated 3 ಏಪ್ರಿಲ್ 2019, 19:30 IST
ಬಿಎಂಟಿಸಿ ಆ್ಯಪ್‌
ಬಿಎಂಟಿಸಿ ಆ್ಯಪ್‌   

ಬೆಂಗಳೂರು: ಬಸ್‌ ಸಂಚಾರದ ಕುರಿತು ಪ್ರಯಾಣಿಕರಿಗೆ ನಿಖರ ಮಾಹಿತಿ ಒದಗಿಸುವ ಉದ್ದೇಶದಿಂದ ಬಿಎಂಟಿಸಿ ಬಿಡುಗಡೆ ಮಾಡಿದ್ದ ಆ್ಯಪ್‌ ನಿಧಾನಗತಿಯ ಕಾರ್ಯವೈಖರಿಯ ಕಾರಣಕ್ಕೆ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.

ಸುಗಮ ಪ್ರಯಾಣಕ್ಕಾಗಿ ಮಾಹಿತಿ ವ್ಯವಸ್ಥೆ ಎಂದು ಆ್ಯಪ್‌ನಲ್ಲಿರುವಬಿಎಂಟಿಸಿ ಲೋಗೊ ಕೆಳಗಡೆ ಬರೆಯಲಾಗಿದೆ. ಆದರೆ ಕಾರ್ಯವೈಖರಿ ಮಾತ್ರ ಅದಕ್ಕೆಸಂಪೂರ್ಣ ವಿರುದ್ಧವಾಗಿದೆ ಎಂದು ಬಳಕೆದಾರರು ಆಕ್ರೋಶ ಹೊರಹಾಕುತ್ತಾರೆ.

ಈಗಿರುವ ಆ್ಯಪ್‌ ಅನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಪ್‌ಡೇಟ್‌ ಮಾಡಲಾಗಿದೆ. ಅದೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ದೂರುತ್ತಾರೆ.

ADVERTISEMENT

ಆ್ಯಪ್‌ನಿಂದತಮಗಾದಕಹಿ ಅನುಭವವನ್ನು ಹಲವರು ‘ಪ್ರಜಾವಾಣಿ’ಯೊಂದಿಗೆಹಂಚಿಕೊಂಡಿದ್ದಾರೆ.

‘ಆ್ಯಪ್‌ ತುಂಬಾ ನಿಧಾನವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ಮುಖ್ಯ ಸಮಸ್ಯೆಯಾಗಿದೆ. ಅದುಎಲ್ಲಾ ಬಸ್‌ಗಳ ನಿಖರಮಾಹಿತಿಯನ್ನು ಒದಗಿಸುವುದಿಲ್ಲ. ಮಾರ್ಗ ಮತ್ತು ವಾಹನದ ಸಂಖ್ಯೆಯನ್ನು ತಪ್ಪಾಗಿ ತೋರಿಸುತ್ತದೆ’ ಎಂದು ವೃತ್ತಿಯಿಂದ ವ್ಯಾಪಾರಿಯಾಗಿರುವ ಶಾಂತಿನಗರ ಮತ್ತು ಮಡಿವಾಳ ಮಧ್ಯೆ ನಿತ್ಯ ಸಂಚರಿಸುವ ಬಾಲು ದೂರಿದರು.

‘ಹತ್ತು ಸೆಕೆಂಡಿಗೊಮ್ಮೆ ಮಾಹಿತಿ ಒದಗಿಸಬೇಕು. ಆದರೆ ಅದು ಒದಗಿಸುವುದಿಲ್ಲ. ಅಲ್ಲದೆ ಹವಾನಿಯಂತ್ರಿತ ಮತ್ತು ಸಾಮಾನ್ಯ ಬಸ್‌ಗಳನ್ನು ಒಂದೇ ವಿಭಾಗದಲ್ಲಿ ತೋರಿಸುತ್ತದೆ. ಅದರಿಂದ ಗೊಂದಲ ಉಂಟಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

‘ನಿತ್ಯವೂ ಡೇರಿ ವೃತ್ತ ಮತ್ತು ಹುಳಿಮಾವು ಮಧ್ಯೆ ಸಂಚರಿಸುತ್ತೇನೆ. ಬಸ್‌ಗಳು ಬರದಿದ್ದಾಗ ಆ್ಯಪ್‌ ಮೊರೆ ಹೋಗುತ್ತೇನೆ. ಒಂದು ಸಾರಿ ಆ್ಯಪ್‌ನ ಮೂಲಕ ಹುಡುಕಿದಾಗಬಸ್‌ ಹಿಂದಿನ ನಿಲ್ದಾಣದಲ್ಲಿದೆ ಎಂದು ತೋರಿಸಿತು. ಬಳಿಕ ನೋಡಿದರೆ, ಅದೇ ಬಸ್‌ಮುಂದಿನ ನಿಲ್ದಾಣದಲ್ಲಿದೆ ಎಂದು ತೋರಿಸಿತು’ ಎಂದು ಮತ್ತೊಬ್ಬ ಬಳಕೆದಾರ ಡಿ.ಶಿವಕುಮಾರ ದನಿಗೂಡಿಸಿದರು.

‘ಒಮ್ಮೆ ಬಸ್‌ ಇಲ್ಲ ಎಂದು ಆ್ಯಪ್‌ ತೋರಿಸಿದ್ದನ್ನು ನಂಬಿ ದುಪ್ಪಟ್ಟು ದರ ತೆತ್ತು ಖಾಸಗಿ ವಾಹನದಲ್ಲಿ ತೆರಳಲು ಅಣಿಯಾಗುತ್ತಿದ್ದಾಗ ಬಸ್‌ ಬಂತು’ ಎಂದು ಅವರು ತಮಗಾದ ಕಹಿ ಅನುಭವವನ್ನು ಹಂಚಿಕೊಂಡರು.

‘ಆ್ಯಪ್‌ ಕೆಟ್ಟ ಅನುಭವ ನೀಡಿತು. ಇದು ಅಧಿಕಾರಿಗಳಬೇಜವಾಬ್ದಾರಿಯನ್ನು ತೋರಿಸುತ್ತದೆ. ಸರ್ಕಾರಿ ಸಂಸ್ಥೆಗಳ ವರ್ತನೆಗೆ ನೈಜ ಉದಾಹರಣೆ’ ಎಂದು ವೃತ್ತಿಯಿಂದ ಸಾಫ್ಟ್‌ವೇರ್‌ಎಂಜಿನಿಯರ್ ಆಗಿರುವ ಅತುಲ್‌ ಶರ್ಮಾ ಬಿಎಂಟಿಸಿಯ ವಿರುದ್ಧಆಕ್ರೋಶ ಹೊರಹಾಕಿದರು.

ಆ್ಯಪ್‌ನಲ್ಲಿ ಕೆಲವು ಮಾರ್ಗಗಳ ಮಾಹಿತಿ ಲಭ್ಯವಿಲ್ಲ. ‘ನೀವು ನಮೂದಿಸಿದ ಮಾರ್ಗದ ಮಾಹಿತಿ ಲಭ್ಯವಿಲ್ಲ’ ಎಂದು ತೋರಿಸುತ್ತದೆ. ಕೆಲವು ಬಸ್‌ಗಳಲ್ಲಿ ಜಿಪಿಎಸ್‌ ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಕಾರಣ ಬಸ್‌ಗಳ ಮಾಹಿತಿ ಲಭ್ಯವಾಗುತ್ತಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಸುಗಮ ಸಂಚಾರದ ಜೊತೆಗೆ ಪ್ರಯಾಣಿಕ ಸ್ನೇಹಿ ವ್ಯವಸ್ಥೆಗಾಗಿ 2016ರ ಮೇ ತಿಂಗಳಲ್ಲಿ ಲಂಡನ್‌ ಮಾದರಿಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಆ್ಯಪ್‌ ಅನ್ನು ಬಿಎಂಟಿಸಿ ಬಿಡುಗಡೆ ಮಾಡಿತ್ತು.ಬಸ್‌ಗಳಿಗೆ ಜಿಪಿಎಸ್ ಉಪಕರಣ ಅಳವಡಿಸಿ, ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್ ಮೂಲಕ ರಿಯಲ್ ಟೈಮ್ ಮಾಹಿತಿ ನೀಡುವ ವ್ಯವಸ್ಥೆಯನ್ನು ಮಾಡಿತ್ತು. ‘ಕೆಲ ತಾಂತ್ರಿಕ ಕಾರಣಗಳಿಂದಾಗಿ ತೃಪ್ತಿಕರ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳೇ ಒಪ್ಪಿಕೊಂಡರು.

**

ಪ್ರಾರಂಭದಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿತ್ತು. ಸದ್ಯ ಮತ್ತೆ ಸಮಸ್ಯೆಯಾಗುತ್ತಿದೆ. ಗುತ್ತಿಗೆ ಪಡೆದುಕೊಂಡವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಏನು ತೊಂದರೆ ಇದೆ ಎನ್ನುವುದರ ಕುರಿತು ಅಧ್ಯಯನ ಮಾಡುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ
– ಡಾ.ಎನ್‌.ವಿ,ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ

**

ಅಂಕಿ–ಅಂಶಗಳು

2016 – ಆ್ಯಪ್‌ ಬಿಡುಗಡೆಯಾದ ವರ್ಷ

6,600 – ಜಿಪಿಎಸ್‌ಗೆ ಅಳವಡಿಸಲಾದ ಬಸ್‌ಗಳ ಸಂಖ್ಯೆ

5 ಲಕ್ಷ – ಆ್ಯಪ್ಡೌನ್‌ಲೋಡ್‌ ಮಾಡಿಕೊಂಡವರ ಸಂಖ್ಯೆ

3.3 – ಬಳಕೆದಾರರು ನೀಡಿದ ರೇಟಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.