ಬೆಂಗಳೂರು: ಟ್ಯೂಷನ್ ಮುಗಿಸಿಕೊಂಡು ತನ್ನ ಸಹೋದರಿ ಮತ್ತು ಸ್ನೇಹಿತೆಯರ ಜತೆಗೆ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಭುವನಾ (9) ಮೃತ ವಿದ್ಯಾರ್ಥಿ. ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ರಾಜಾಜಿನಗರ 1ನೇ ಹಂತದಲ್ಲಿ ಶನಿವಾರ ಬೆಳಿಗ್ಗೆ 11.30ರ ಸುಮಾರಿಗೆ ಘಟನೆ ನಡೆದಿದೆ.
ಮಹಾಲಕ್ಷ್ಮಿ ಲೇಔಟ್‌ನ ಭೋವಿಪಾಳ್ಯದಲ್ಲಿ ಪೋಷಕರೊಂದಿಗೆ ಭುವನಾ ವಾಸವಿದ್ದಳು. ಪಾಂಚಜನ್ಯ ವಿದ್ಯಾಪೀಠ ಶಾಲೆಯಲ್ಲಿ ಓದುತ್ತಿದ್ದಳು.
ಕುಟುಂಬಸ್ಥರ ಆಕ್ರಂದನ: ಕಣ್ಣ ಮುಂದೆಯೇ ಭುವನಾ ಮೃತಪಟ್ಟಿದ್ದನ್ನು ಕಂಡು ಸಹೋದರಿ ಹಾಗೂ ಸ್ನೇಹಿತರು ಕಣ್ಣೀರು ಹಾಕಿದರು. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೋಷಕರು ಆಕ್ರಂದನ ಮುಗಿಲುಮುಟ್ಟಿತ್ತು.
ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಸ್ಥಳದಲ್ಲೇ ಬಸ್ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
9 ವಾಹನಗಳಿಗೆ ಡಿಕ್ಕಿ: ಬಿಎಂಟಿಸಿ ಬಸ್‌ನಿಂದ ಸರಣಿ ಅಪಘಾತ ಸಂಭವಿಸಿದ ಘಟನೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ 9ನೇ ಗೇಟ್ ಬಳಿ ಶನಿವಾರ ನಡೆದಿದೆ. ಅಪಘಾತದಿಂದ ಆಟೊ ಚಾಲಕರೊಬ್ಬರು ಗಾಯಗೊಂಡಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬನಶಂಕರಿ ನಡುವಿನ ಸಂಚರಿಸುವ ಬಸ್ ವೇಗವಾಗಿ ಬಂದು 9 ವಾಹಗಳಿಗೆ ಡಿಕ್ಕಿ ಹೊಡೆದಿದೆ.
ಬಸ್ ಚಾಲಕನಿಗೆ ದಿಢೀರನೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವಘಡ ಸಂಭವಿಸಿದೆ. ಬಸ್ ಜಪ್ತಿ ಮಾಡಲಾಗಿದೆ. ಚಾಲಕನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.