ADVERTISEMENT

ಬಸ್‌ ಪಾಸ್‌ ಕಡ್ಡಾಯವೇ ಸಮಸ್ಯೆ !

3ರಿಂದ 4 ಕಿ.ಮೀ. ಪ್ರಯಾಣಕ್ಕೂ ₹70 ನೀಡಬೇಕು * ಬಸ್‌ ಇದ್ದರೂ ಸೇವೆ ಪಡೆಯಲಾಗಲಿಲ್ಲ

​ಪ್ರಜಾವಾಣಿ ವಾರ್ತೆ
Published 20 ಮೇ 2020, 1:49 IST
Last Updated 20 ಮೇ 2020, 1:49 IST
ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ ಇತ್ತು  -ಪ್ರಜಾವಾಣಿ ಚಿತ್ರ
ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ ಇತ್ತು  -ಪ್ರಜಾವಾಣಿ ಚಿತ್ರ   

ಬೆಂಗಳೂರು: ಒಂದೂವರೆ ತಿಂಗಳ ನಂತರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಮಂಗಳವಾರದಿಂದ ಸಾರ್ವಜನಿಕರಿಗೆ ಬಸ್‌ ಸೇವೆ ಆರಂಭಿಸಿತು. ಆದರೆ, ಪಾಸ್‌ ಕಡ್ಡಾಯ ಮಾಡಿದ್ದರಿಂದ ಬಹಳಷ್ಟು ಜನ ತೊಂದರೆ ಅನುಭವಿಸಿದರು. ದಿನದ ಪಾಸ್‌ ತೆಗೆದುಕೊಳ್ಳಲೇಬೇಕು ಎಂದು ನಿರ್ವಾಹಕರು ಹೇಳುತ್ತಿದ್ದಂತೆ ಎಷ್ಟೋ ಜನ ಬಸ್‌ನಿಂದ ಕೆಳಗಿಳಿದು ತೆರಳುತ್ತಿದ್ದುದು ಸಾಮಾನ್ಯವಾಗಿತ್ತು.

‘ನಾನು ತುಮಕೂರಿಗೆ ಹೋಗಬೇಕಾಗಿತ್ತು. ಆರ್.ಟಿ. ನಗರದಿಂದ ಮೆಜೆಸ್ಟಿಕ್‌ಗೆ ಹೋಗಲು ಬಸ್‌ ಏರಿದರೆ, ಪಾಸ್‌ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು. ₹20 ಟಿಕೆಟ್‌ ಬದಲು, ಪಾಸ್‌ಗೆ ₹70 ನೀಡಬೇಕಾಯಿತು. 7 ಕಿ.ಮೀ. ಪ್ರಯಾಣಕ್ಕೆ ₹70 ನೀಡಬೇಕು ಎಂದರೆ ಹೇಗೆ’ ಎಂದು ಪ್ರಯಾಣಿಕ ರಮೇಶ್‌ ಎಂಬುವರು ಪ್ರಶ್ನಿಸಿದರು.

‘ಒಂದು ಅಥವಾ ಎರಡು ಬಾರಿಯ ಪ್ರಯಾಣಕ್ಕೂ ಪಾಸ್‌ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಕೆಲಸವೇ ಇಲ್ಲದ ಈ ಸಂದರ್ಭದಲ್ಲಿ ಐವತ್ತು, ನೂರು ರೂಪಾಯಿ ಕೂಡ ನಮಗೆ ದೊಡ್ಡದು’ ಎಂದು ಅವರು ಹೇಳಿದರು.

ADVERTISEMENT

‘5ರಿಂದ 6 ಕಿ.ಮೀ. ದೂರ ಹೋಗಲು ಬಸ್‌ಗೆ ₹70 ಕೊಡುವ ಬದಲು, ಆಟೊದಲ್ಲಿ ಇಬ್ಬರು ಹೋದರೆ, ಬಾಡಿಗೆ ಮೊತ್ತವನ್ನು ಹಂಚಿಕೊಳ್ಳಬಹುದು’ ಎಂದು ಪ್ರಭಾಕರ್ ಎಂಬುವರು ಹೇಳಿದರು.

ಬಸ್‌ ಪಾಸ್ ಕಡ್ಡಾಯ ನಿಯಮದಿಂದ ಪ್ರಯಾಣಿಕರು ಎದುರಿಸಿದ ತೊಂದರೆಗಳ ಬಗ್ಗೆ ಬಿಎಂಟಿಸಿ ಬಸ್‌ ಪ್ರಯಾಣಿಕರ ವೇದಿಕೆ, ಟ್ವಿಟರ್‌ನಲ್ಲಿ ನಿರಂತರವಾಗಿ ಪ್ರಸ್ತಾಪಿಸಿ ಗಮನ ಸೆಳೆಯಿತು.

ನಿಲ್ಲಿಸಲೇ ಇಲ್ಲ:

ನಗರದಲ್ಲಿ ಮಂಗಳವಾರ 2,000 ಬಸ್‌ಗಳು ಸಂಚರಿಸಿದರೂ, ದಟ್ಟಣೆಯ ಪ್ರದೇಶ ಹೊರತು ಪಡಿಸಿ, ಉಳಿದ ಭಾಗಗಳಿಗೆ ಬಸ್‌ ಸೇವೆ ಇರಲಿಲ್ಲ.

‘ಬಸ್‌ ಖಾಲಿ ಸಂಚರಿಸುತ್ತಿದ್ದರೂ, ಕೆಲವು ನಿಲ್ದಾಣದಲ್ಲಿ ಬಸ್‌ ನಿಲ್ಲಿಸಲೇ ಇಲ್ಲ’ ಎಂದು ಪ್ರಯಾಣಿಕರೊಬ್ಬರು ದೂರಿದರು.

ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಹೋಲಿಸಿದರೆ, ಬಿಎಂಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಪ್ರಯಾಣಿಕರಿಗೆ ಮುಖಗವಸು ಕಡ್ಡಾಯ ಮಾಡಲಾಗಿತ್ತು. ಚಾಲಕರು ಮತ್ತು ನಿರ್ವಾಹಕರು ಮುಖ–ಕೈಗವಸು ಧರಿಸಿದ್ದರು.

ದಿನ, ವಾರ ಮತ್ತು ತಿಂಗಳ ಪಾಸ್‌ಗಳನ್ನು ಖರೀದಿಸಲು ಜನ ಸರದಿಯಲ್ಲಿ ನಿಂತಿದ್ದರು. ವ್ಯಕ್ತಿಗತ ಅಂತರ ಕಾಪಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.