ADVERTISEMENT

ವರ್ಷವಾದರೂ ಕೆಲಸಕ್ಕೆ ಕರೆದಿಲ್ಲ, ಬದುಕು ನಡೆಸುವುದು ಹೇಗೆ: ಬಿಎಂಟಿಸಿ ನೌಕರರ ಅಳಲು

ಮುಷ್ಕರದಲ್ಲಿ ಭಾಗವಹಿಸದಿದ್ದರೂ ವಜಾ: ಬಿಎಂಟಿಸಿ ನೌಕರರ ಅಳಲು

ಜಿ.ಶಿವಕುಮಾರ
Published 5 ಏಪ್ರಿಲ್ 2022, 19:41 IST
Last Updated 5 ಏಪ್ರಿಲ್ 2022, 19:41 IST
ಬಿಎಂಟಿಸಿ
ಬಿಎಂಟಿಸಿ   

ಬೆಂಗಳೂರು: ‘ನಾವು ಯಾವ ಮುಷ್ಕರದಲ್ಲೂ ಪಾಲ್ಗೊಂಡಿಲ್ಲ. ನಮ್ಮಿಂದ ಯಾವ ತಪ್ಪೂ ಆಗಿಲ್ಲ. ಹೀಗಿದ್ದರೂ ಕೆಲಸದಿಂದ ವಜಾ ಮಾಡಿದ್ದಾರೆ. ವರ್ಷ ಸಮೀಪಿಸುತ್ತಾ ಬಂದರೂ ನ್ಯಾಯ ಸಿಕ್ಕಿಲ್ಲ. ದುಡಿಮೆ ಇಲ್ಲದೆ ದಿಕ್ಕೇ ತೋಚದಾಗಿದೆ’...

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ (ಬಿಎಂಟಿಸಿ) ವಜಾಗೊಂಡಿರುವ ನಿರ್ವಾಹಕರು ಹಾಗೂ ಚಾಲಕರ ಅಳಲು ಇದು.

ಆರನೇ ವೇತನ ಆಯೋಗದ ಶಿಫಾರಸುಗಳನ್ನು ಸಾರಿಗೆ ನೌಕರರಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಿ 2021ರ ಏಪ್ರಿಲ್‌ನಲ್ಲಿ ನೌಕರರು ಮುಷ್ಕರ ನಡೆಸಿದ್ದರು. ಇದಕ್ಕೆ ಜಗ್ಗದ ಸರ್ಕಾರ, ಮುಷ್ಕರನಿರತ ನೌಕರರ ವಿರುದ್ಧ ವಜಾ ಮತ್ತು ಅಮಾನತು ಅಸ್ತ್ರ ಪ್ರಯೋಗಿಸಿತ್ತು. ಹೀಗಾಗಿ ಕಾಯಂ ನೌಕರರ ಕೆಲಸಕ್ಕೂ ಕುತ್ತು ಎದುರಾಗಿತ್ತು.

ADVERTISEMENT

‘ಸುಮಾರು 1,350 ಮಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಪೈಕಿ ತರಬೇತಿ ನಿರತ 300 ನೌಕರರನ್ನು ಹಲವು ಷರತ್ತುಗಳ ಮೇಲೆ ಮರು ನೇಮಕ ಮಾಡಲಾಗಿದೆ. ಕಾಯಂ ನೌಕರರ ಪೈಕಿ ಹಲವರಿಂದ ಮುಚ್ಚಳಿಕೆ ಬರೆಸಿಕೊಂಡು ಕರ್ತವ್ಯಕ್ಕೆ ಮರಳಲು ಅವಕಾಶ ನೀಡಲಾಗಿದೆ. ಆದರೆ 22 ವರ್ಷ ನಿಷ್ಠೆಯಿಂದ ಸಂಸ್ಥೆಗಾಗಿ ದುಡಿದ ನನ್ನಂತಹ ಹಲವರನ್ನು ವಜಾಗೊಳಿಸಲಾಗಿದೆ’ ಎಂದು ಯಶವಂತಪುರದ ಘಟಕ 8ರಲ್ಲಿ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಮಾಲತಿ ಬೇಸರ ವ್ಯಕ್ತಪಡಿಸಿದರು.

‘ಮುಷ್ಕರದ ಅವಧಿಯಲ್ಲಿ ಶೇ 90ರಷ್ಟು ಕಾರ್ಮಿಕರು ಕರ್ತವ್ಯಕ್ಕೆ ಗೈರಾಗಿದ್ದರು. ಈ ಪೈಕಿ ಕೆಲವರಿಗೆ ಕೆಲಸ ಮಾಡಲು ಅನುವು ಮಾಡಿಕೊಟ್ಟು ಉಳಿದವರಿಗೆ ಸಂಬಳ ಸಿಗದಂತೆ ಮಾಡಿ ಮನೆಯಲ್ಲಿ ಕೂರಿಸಿರುವುದು ಯಾವ ನ್ಯಾಯ.11 ತಿಂಗಳಿಂದ ವೇತನ ಕೊಟ್ಟಿಲ್ಲ. ಹೀಗಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ’ ಎಂದು ಅಳಲು ತೋಡಿಕೊಂಡರು.

‘ಸಂಸ್ಥೆಯಲ್ಲಿ ನಿರ್ವಾಹಕರ ಕೊರತೆ ಇದೆ. ಮರು ನೇಮಕಗೊಂಡವರು ಹೆಚ್ಚುವರಿ ಅವಧಿ ಕೆಲಸ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕಾರ್ಯಭಾರ ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೋವಿಡ್‌ ಲಸಿಕೆ ತೆಗೆದುಕೊಂಡಿದ್ದರಿಂದಾಗಿ ಸೊಂಟ ಹಾಗೂ ಮಂಡಿಯ ನೋವು ಬಾಧಿಸಿತ್ತು. ಹೀಗಾಗಿ 2021ರ ಏಪ್ರಿಲ್‌ 3 ಹಾಗೂ 5ರಂದು ರಜೆ ಹಾಕಿದ್ದೆ. ರಜೆ ಮಂಜೂರು ಮಾಡುವಂತೆ ಡಿಪೊ ವ್ಯವಸ್ಥಾಪಕರಿಗೆ ವಾಟ್ಸಾಪ್‌ ಸಂದೇಶವನ್ನೂ ಕಳುಹಿಸಿದ್ದೆ. ಅದಕ್ಕೆ ಅವರು ಸ್ಪಂದಿಸಿರಲಿಲ್ಲ. ಆರೋಗ್ಯ ಸರಿ ಇಲ್ಲದಿದ್ದರೆ ಕೆಲಸ ಮಾಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.