ADVERTISEMENT

ಸುಳ್ಳು ಮಾಹಿತಿಗೆ ಕಿವಿಗೊಡದೆ ಕರ್ತವ್ಯಕ್ಕೆ ಹಾಜರಾಗಿ: ಸಿ.ಶಿಖಾ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 21:22 IST
Last Updated 19 ಏಪ್ರಿಲ್ 2021, 21:22 IST

ಬೆಂಗಳೂರು: ಮುಷ್ಕರದಲ್ಲಿ ಭಾಗಿಯಾದ ಸಿಬ್ಬಂದಿಯ ಅಮಾನತು ಮತ್ತು ವಜಾ ಆದೇಶ ಹಿಂತೆಗೆದುಕೊಳ್ಳುವ ಬಗ್ಗೆ ಸುಳ್ಳು ಮಾಹಿತಿ ಹರಡಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಈ ರೀತಿಯ ಆಲೋಚನೆ ಇಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಸ್ಪಷ್ಟಪಡಿಸಿದ್ದಾರೆ.

ಈ ರೀತಿಯ ಸುಳ್ಳು ಮಾಹಿತಿಯನ್ನು ಹರಿಬಿಡುವ ಮೂಲಕ ಮುಷ್ಕರವನ್ನು ಬೆಂಬಲಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮುಷ್ಕರದ ಬಗ್ಗೆ ಹೈಕೋರ್ಟ್‌ ಮಧ್ಯಸ್ಥಿಕೆ ವಹಿಸಲಿದೆ ಎಂಬ ಸಂದೇಶಗಳನ್ನು ಹರಿಬಿಡಲಾಗುತ್ತಿದೆ. ಇವೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ.

‘ಮುಷ್ಕರವನ್ನು ಪ್ರೋತ್ಸಾಹಿಸುವ ಮತ್ತು ಕರ್ತವ್ಯಕ್ಕೆ ಗೈರಾದವರ ವಿರುದ್ಧ ಬಿಎಂಟಿಸಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಮಾನತು ಅಥವಾ ವಜಾಗೊಳಿಸಿದ ನಂತರ ಅನೇಕ ಉದ್ಯೋಗಿಗಳು ಯೂನಿಯನ್ ಭಯದಿಂದಾಗಿ ಕೆಲಸಕ್ಕೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಕೆಲಸಕ್ಕೆ ಮರಳುವ ನೌಕರರಿಗೆ ಸಾಕಷ್ಟು ಪೊಲೀಸ್ ರಕ್ಷಣೆ ನೀಡಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

‘ಶುಕ್ರವಾರದಿಂದ ಬಸ್‌ಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸುಳ್ಳು ಸುದ್ದಿಗಳನ್ನು ನಂಬದೆನೌಕರರೆಲ್ಲರೂ ಸಾರ್ವಜನಿಕ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ತಿಳಿಸಿದ್ದಾರೆ.

ಈ ನಡುವೆ ಬಿಎಂಟಿಸಿಯ 200 ಸಿಬ್ಬಂದಿಯನ್ನು ವಜಾಗೊಳಿಸಿ ಸೋಮವಾರ ಆದೇಶಿಸಿದೆ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ವಿರುದ್ಧ ಅಮಾನತು ಮತ್ತು ವಜಾ ಪ್ರಕ್ರಿಯೆಗಳು ಮುಂದುವರಿಯಲಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.