ADVERTISEMENT

ಬಿಎಂಟಿಸಿ ವಿದ್ಯಾರ್ಥಿ ಬಸ್‌ಪಾಸ್‌ ನವೀಕರಣಕ್ಕೆ ಸೇವಾ ಶುಲ್ಕ ಕಡಿತ

ನೂತನ ಪಾಸ್‌ಗೆ ಎಂದಿನಂತೆ ₹200 ಪಾವತಿ

​ಪ್ರಜಾವಾಣಿ ವಾರ್ತೆ
Published 17 ಮೇ 2019, 19:55 IST
Last Updated 17 ಮೇ 2019, 19:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸ್ಮಾರ್ಟ್‌ ಕಾರ್ಡ್‌ ಮಾದರಿಯ ವಿದ್ಯಾರ್ಥಿ ಬಸ್‌ಪಾಸ್‌ ಮೇಲಿನ ಸೇವಾ ಶುಲ್ಕದಲ್ಲಿ ₹30 ಕಡಿತಗೊಳಿಸಿದೆ.‌ ಅದರಂತೆ ವಿದ್ಯಾರ್ಥಿಗಳು ₹200 ಬದಲು ₹170 ಪಾವತಿಸ
ಬಹುದು ಎಂದು ಸಂಸ್ಥೆ ತಿಳಿಸಿದೆ.

ಇದು ಕಳೆದ ಬಾರಿ ವಿತರಿಸಿದ ಸ್ಮಾರ್ಟ್‌ಕಾರ್ಡ್‌ ನವೀಕರಣ ಮಾಡಿಸುವವರಿಗೆ ಮಾತ್ರ ಅನ್ವಯಿಸಲಿದೆ.ಆದರೆ, ಈ ವರ್ಷ ನೂತನವಾಗಿ ಸ್ಮಾರ್ಟ್‌ಕಾರ್ಡ್‌ ಪಡೆಯುವವರು ಹಿಂದಿನ ದರದಂತೆ ₹200 ರೂ‍ಪಾಯಿ ಸೇವಾ ಶುಲ್ಕ ಪಾವತಿಸಬೇಕು ಎಂದು ತಿಳಿಸಿದೆ.

2019–20ನೇ ಸಾಲಿನ ಸ್ಮಾರ್ಟ್‌ಕಾರ್ಡ್‌ ವಿತರಣೆಗಾಗಿ ಸಂಸ್ಥೆ ಅರ್ಜಿ ಆಹ್ವಾನಿಸಿದೆ. ಪರಿಶಿಷ್ಟ ಜಾತಿ ಹಾಗೂಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಂದಿನಂತೆ ಬಸ್‌ ಪಾಸ್‌ ಉಚಿತವಾಗಿ ಸಿಗಲಿದೆ. ಆದರೆ, ₹200 ರೂಪಾಯಿ ಸೇವಾ ಶುಲ್ಕವನ್ನು ಎಲ್ಲರೂ ಕಡ್ಡಾಯವಾಗಿ ಪಾವತಿಸಬೇಕು.

ADVERTISEMENT

ಕಾಲೇಜಿನಲ್ಲೇ ಮಾಹಿತಿ:ವಿದ್ಯಾರ್ಥಿಗಳು ಪಾಸ್‌ ಪಡೆಯಲು ಯಾವುದೇ ಗೊಂದಲಗಳಾದಂತೆ ತಡೆಯಲು ಕಾಲೇಜಿನ ಉಪನ್ಯಾಸಕರೊಬ್ಬರು ಮಾಹಿತಿ ನೀಡಲಿದ್ದಾರೆ. ಬಸ್‌ ಪಾಸ್‌ ಪಡೆಯುವ ವಿಧಾನ, ನವೀಕರಣ, ಪಾಸ್‌ ದೊರೆಯುವ ಸ್ಥಳದ ಮಾಹಿತಿ ನೀಡುವಂತೆ ಎಲ್ಲ ಕಾಲೇಜಿನ ಪ್ರಾಂಶುಪಾಲರಿಗೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.

ನಗರದಲ್ಲಿ ಕೌಂಟರ್‌ ಎಲ್ಲೆಲ್ಲಿ?: ವಿದ್ಯಾರಣ್ಯಪುರ, ಯಲಹಂಕ ಸ್ಯಾಟಲೈಟ್ ಟೌನ್‌, ಬಸವೇಶ್ವರನಗರ,ಇಸ್ರೊ ಲೇಔಟ್‌,ಬನ್ನೇರುಘಟ್ಟ, ಎಲೆಕ್ಟ್ರಾನಿಕ್‌ ಸಿಟಿ ಡಿಪೋ-19, ಶ್ರೀವಿದ್ಯಾನಗರ, ಎನ್‌.ಆರ್‌.ಕಾಲೊನಿ, ನಂದಿನಿ ಲೇಔಟ್‌, ಮಲ್ಲೇಶ್ವರ,ಪೀಣ್ಯ, ದೊಮ್ಮಲೂರು ಟಿಟಿಎಂಸಿ, ಎಂಸಿಟಿಸಿ ಬಸ್‌ ನಿಲ್ದಾಣದಲ್ಲಿ ತಲಾ 2 ಕೌಂಟರ್‌ಗಳನ್ನು ತೆರೆಯಲಾಗಿದೆ.

ಯಲಹಂಕ ಓಲ್ಡ್ ಟೌನ್‌,ವೈಟ್‌ಫೀಲ್ಡ್‌, ಕೋರಮಂಗಲ ಟಿಟಿಎಂಸಿ, ಜಯನಗರ ಟಿಟಿಎಂಸಿ, ಯಶವಂತಪುರ, ಶಿವಾಜಿನಗರ, ಕೆಂಗೇರಿ
ಟಿಟಿಎಂಸಿಯಲ್ಲಿ ತಲಾ 4 ಕೌಂಟರ್‌, ಬನಶಂಕರಿ ಟಿಟಿಎಂಸಿಯಲ್ಲಿ 6, ಶಾಂತಿನಗರ ಟಿಟಿಎಂಸಿ, ವಿಜಯನಗರ ಟಿಟಿಎಂಸಿಯಲ್ಲಿ ತಲಾ 8 ಕೌಂಟರ್‌ಗಳನ್ನು ತೆರೆಯಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.