ADVERTISEMENT

ಬಿಎಂಟಿಎಫ್‌ ರದ್ದು: ಏಳು ವರ್ಷಗಳ ಹಳೆ ಪ್ರಸ್ತಾವಕ್ಕೆ ಮರುಜೀವ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 19:12 IST
Last Updated 27 ಅಕ್ಟೋಬರ್ 2018, 19:12 IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದಲೇ ಸುದ್ದಿಯಾಗಿರುವ ಬೆಂಗಳೂರು ಮಹಾನಗರ ಕಾರ್ಯಪಡೆಯನ್ನು (ಬಿಎಂಟಿಎಫ್‌) ರದ್ದುಪಡಿಸಿ ಪಾಲಿಕೆ ಭದ್ರತಾ ಪಡೆ (ಸಿಎಸ್‌ಎಫ್‌) ರಚಿಸುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಮರುಜೀವ ನೀಡಿದೆ.

ರಾಜಕಾಲುವೆ ಒತ್ತುವರಿ ಮಾಡಲು ಸಹಕರಿಸಿದ ಆರೋಪದ ಮೇರೆಗೆ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಬಿಎಂಟಿಎಫ್‌ ಬಿ–ವರದಿ ಸಲ್ಲಿಸಿತ್ತು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ, ಈ ‍ಪ್ರಸ್ತಾವಕ್ಕೆ ಈಗ ಮರುಜೀವ ನೀಡಲಾಗಿದೆ.

ADVERTISEMENT

ಕಳೆದ 22 ವರ್ಷಗಳಿಂದ ಅಸ್ತಿತ್ವದಲ್ಲಿರುವ ಕಾರ್ಯಪಡೆ, ಸರ್ಕಾರಿ ಭೂಮಿಗಳನ್ನು ಸಂರಕ್ಷಿಸುವ ಹಾಗೂ ಅಧಿಕಾರಿಗಳ ಮೇಲಿನ ಆರೋಪಗಳ ತನಿಖೆಯ ಹೊಣೆ ಹೊತ್ತುಕೊಂಡಿದೆ. ಬಿಬಿಎಂಪಿ ಮಾತ್ರವಲ್ಲದೆ, ಬಿಡಿಎ, ಜಲಮಂಡಳಿ ಹಾಗೂ ಕರ್ನಾಟಕ ಕೊಳೆಗೇರಿ ಮಂಡಳಿಯ ಪ್ರಕರಣಗಳ ತನಿಖೆ ನಡೆಸುತ್ತಿದೆ. ಸಿಎಸ್‌ಎಫ್‌ಗೆ ಪಾಲಿಕೆಯ ಆಯುಕ್ತರು ಮುಖ್ಯಸ್ಥರಾಗಿರುತ್ತಾರೆ.

ಏಳು ವರ್ಷಗಳ ಹಿಂದೆ ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಸಿಎಸ್‌ಎಫ್‌ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾದ ಕಾರಣ ಪ್ರಸ್ತಾವ ಕೈಬಿಡಲಾಗಿತ್ತು.

‘ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಈ ವಿಷಯ ಚರ್ಚಿಸಲು ನಿರ್ಧರಿಸಲಾಗಿತ್ತು. ಆ ಸಭೆ ರದ್ದುಗೊಂಡಿತ್ತು. ಶೀಘ್ರದಲ್ಲಿ ಈ ವಿಷಯ ಚರ್ಚೆ ಮಾಡಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಬಿಎಂಟಿಎಫ್‌ ಹಲವು ರಾಜಕಾರಣಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು. ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಸರ್ಕಾರಿ ಆದೇಶ ಹೊರ ಬಂದ ಮರುದಿನವೇ, ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನೆ ಮಾಡುತ್ತೇನೆ’ ಎಂದು ಬಿಜೆಪಿ ನಗರ ಜಿಲ್ಲಾ ವಕ್ತಾರ ಎನ್‌.ಆರ್.ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.