ADVERTISEMENT

ಕಾರುಗಳ ಮೇಲೆ ಹೂಡಿಕೆ: ₹1.60 ಕೋಟಿ ವಂಚನೆ

'ಸ್ಟೆರ್ಲಿಂಗ್ ಕ್ಯಾಬ್ಸ್’ ಕಂಪನಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 10:04 IST
Last Updated 17 ಏಪ್ರಿಲ್ 2022, 10:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾರುಗಳ ಮೇಲೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಲಾಭಾಂಶ ನೀಡುವುದಾಗಿ ಹೇಳಿ ಜನರಿಂದ ₹ 1.60 ಕೋಟಿ ಪಡೆದು ವಂಚಿಸಲಾಗಿದ್ದು, ಈ ಬಗ್ಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಣ ಹೂಡಿಕೆ ಮಾಡಿ ವಂಚನೆಗೀಡಾಗಿರುವ ಉದ್ಯಮಿ ಮಧುಸೂದನ್ ದೂರು ನೀಡಿದ್ದಾರೆ. 'ಸ್ಟೆರ್ಲಿಂಗ್ ಕ್ಯಾಬ್ಸ್’ ಕಂಪನಿಯ ಕೆ.ಜಿ. ಎಡ್ವಿನ್, ವಿನಯ್, ರಾಘವೇಂದ್ರ, ಮಹೇಶ್ ಶೆಟ್ಟಿ, ರವಿಕುಮಾರ್, ಮಣಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘2021ರಲ್ಲಿ ದೂರುದಾರರಿಗೆ ಕರೆ ಮಾಡಿದ್ದ ಆರೋಪಿಗಳು, ‘ನಮ್ಮದು ಸ್ಟೆರ್ಲಿಂಗ್ ಕ್ಯಾಬ್ಸ್ ಕಂಪನಿ ಇದೆ. ಕಾರುಗಳನ್ನು ಸಾಫ್ಟ್‌ವೇರ್ ಹಾಗೂ ಇತರೆ ಕಂಪನಿಗಳಿಗೆ ಬಾಡಿಗೆ ನೀಡುತ್ತಿದ್ದೇವೆ. ಒಂದು ಕಾರಿನ ಮೇಲೆ ₹ 4 ಲಕ್ಷ ಹೂಡಿಕೆ ಮಾಡಿದರೆ, ಅದರ ಬಾಡಿಗೆಯಿಂದ ಬರುವ ಹಣದಲ್ಲಿ ಪ್ರತಿ ತಿಂಗಳು ₹ 20 ಸಾವಿರ ನೀಡಲಾಗುವುದು. 48 ತಿಂಗಳ ಬಳಿಕ ಕಾರನ್ನೂ ವಾಪಸು ಕೊಡಲಾಗುವುದು’ ಎಂಬುದಾಗಿ ಹೇಳಿದ್ದರು. ಅದನ್ನು ನಂಬಿದ್ದ ದೂರುದಾರ, ಹಣ ಹೂಡಿಕೆ ಮಾಡಿದ್ದರು.’

ADVERTISEMENT

‘ಆರೋಪಿಗಳು ಮೂರು ತಿಂಗಳು ಮಾತ್ರ ಹಣ ನೀಡಿದ್ದರು. ನಂತರ ನಿಲ್ಲಿಸಿದ್ದರು. ಈ ಬಗ್ಗೆ ಪ್ರಶ್ನಿಸಲು ಆರೋಪಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಮಧುಸೂದನ್ ದೂರಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

‘ಕಂಪನಿಯಲ್ಲಿ 40ಕ್ಕೂ ಹೆಚ್ಚು ಮಂದಿ ₹ 1.60 ಕೋಟಿ ಹೂಡಿಕೆ ಮಾಡಿದ್ದು, ಬಹುತೇಕರಿಗೆ ವಂಚನೆಯಾಗಿರುವ ಮಾಹಿತಿ ಇದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.