ADVERTISEMENT

ಜನಪರ ಹೋರಾಟಗಳ ಬೆನ್ನಿಗೆ ನಿಲ್ಲಿ: ಬಾಂಬೆ ಹೈಕೋರ್ಟ್‌ ಹಿರಿಯ ವಕೀಲ

​ಪ್ರಜಾವಾಣಿ ವಾರ್ತೆ
Published 28 ಮೇ 2022, 20:29 IST
Last Updated 28 ಮೇ 2022, 20:29 IST

ಬೆಂಗಳೂರು: ‘ಅಲ್ಪಸಂಖ್ಯಾತರು, ದಮನಿದಲಿತರು, ಮಹಿಳೆಯರ ಧ್ವನಿಯನ್ನು ಹತ್ತಿಕ್ಕುವ ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ವಕೀಲರು ಕೋರ್ಟ್‌ ಒಳಗೆ ಮಾತ್ರವಲ್ಲದೆ ಹೊರಗೂ ಕೂಡ ತಮ್ಮ ಪಾತ್ರ ನಿರ್ವಹಣೆಗೆ ಸಜ್ಜಾಗಬೇಕು’ ಎಂದು ಬಾಂಬೆ ಹೈಕೋರ್ಟ್‌ ಹಿರಿಯ ವಕೀಲಮಿಹೀರ್ ದೇಸಾಯಿಅಭಿಪ್ರಾಯಪಟ್ಟರು.

ಶನಿವಾರ ಇಲ್ಲಿ ನಡೆದ ‘ನ್ಯಾಯಕ್ಕಾಗಿ ಅಖಿಲ ಭಾರತ ವಕೀಲರ ಸಂಘ’ದ (ಎಐಎಲ್‌ಎಜೆ)ಮೊದಲನೇ ರಾಷ್ಟ್ರೀಯ ಸಮ್ಮೇಳನದಲ್ಲಿ ‘ಫ್ಯಾಸಿಸಂ ದಾಳಿ ಎದುರಿಸುವುದರಲ್ಲಿ ವಕೀಲರ ಪಾತ್ರ’ದ ಕುರಿತು ಅವರು ಮಾತನಾಡಿದರು.

‘ದೇಶದಾದ್ಯಂತ ಪ್ರಜಾಪ್ರಭುತ್ವದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಸರ್ವಾಧಿಕಾರ ವಿಜೃಂಭಿಸುತ್ತಿದ್ದು ಹಿಂದೂ ರಾಷ್ಟ್ರ ಸ್ಥಾಪನೆಗೆ ಪ್ರಯತ್ನಿಸಲಾಗುತ್ತಿದೆ. ಭಾಷೆ, ಸಂಸ್ಕೃತಿಗಳ ಬಹುತ್ವವನ್ನು ಹತ್ತಿಕ್ಕಲಾಗುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕಾನೂನು ರೂಪಿಸಲಾಗುತ್ತಿದೆ. ಪ್ರಭುತ್ವದ ವಿರುದ್ಧದ ದನಿಯನ್ನು ಅಡಗಿಸಲಾಗುತ್ತಿದೆ. ಕೃಷಿ, ಜಿಎಸ್‌ಟಿಯಂತಹ ಕಾನೂನುಗಳ ಮುಖಾಂತರ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ. ವಕೀಲರು ತಮ್ಮ ಸಾಮಾಜಿಕ ಜವಾಬ್ದಾರಿಯ ಮುಖಾಂತರ ಇಂತಹ ಅಪಾಯಕಾರಿ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಬೇಕಿದೆ‘ ಎಂದರು.

‘ವಕೀಲರು ಜನಪರ ಚಳವಳಿಗಳ ಭಾಗವಾಗಬೇಕು. ಚಳವಳಿಗಳು ಏನು ಹೇಳುತ್ತಿವೆ, ಚಳವಳಿಕಾರರ ದನಿಯ ಆಶಯಗಳೇನು ಎಂಬುದನ್ನು ಅರಿಯಬೇಕು. ಹೋರಾಟಗಾರರು ಜೈಲಿನಲ್ಲಿದ್ದರೆ ಅವರಿಗೆ ಜಾಮೀನು ಕೊಡಿಸುವ ಪ್ರಕ್ರಿಯೆಗಳಿಂದ ಹಿಡಿದು ಅವರ ಪರವಾಗಿ ನ್ಯಾಯ ದೊರಕಿಸಲು ಎಲ್ಲ ಪ್ರಯತ್ನ ಮಾಡಬೇಕು. ಸಂವಿಧಾನದ ಮೌಲ್ಯಗಳು, ಮಾನವ ಹಕ್ಕುಗಳ ರಕ್ಷಣೆಯನ್ನು ತಮ್ಮ ವಾದ ಸರಣಿಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇರ್ಪಡೆ ಮಾಡುವ ಮುಖಾಂತರ ಆಶಾದಾಯಕವಾಗಿ ಹೋರಾಟಗಾರರ ಬೆನ್ನಿಗೆ ನಿಲ್ಲಬೇಕು’ ಎಂದರು.

ಕಾರ್ಯಕ್ರಮದಲ್ಲಿ ‘ನ್ಯಾಯಕ್ಕಾಗಿ ಅಖಿಲ ಭಾರತ ವಕೀಲರ ಸಂಘ’ದ ರಾಷ್ಟ್ರ ಸಂಚಾಲಕಿ ಮೃತ್ರೇಯಿ ಕೃಷ್ಣನ್‌ ಮತ್ತು ಕ್ಲಿಫ್ಟನ್‌ ಡಿ ರೊಜಾರಿಯೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.