ADVERTISEMENT

ಪಾರ್ಟಿಯಲ್ಲಿ ಭಾಗವಹಿಸಿದ್ದ ಬೊಮ್ಮನಹಳ್ಳಿ ಅಪಾರ್ಟ್‌ಮೆಂಟ್‌ನ 103 ಜನಕ್ಕೆ ಸೋಂಕು

ಕೋವಿಡ್‌ ಕ್ಷಿಪ್ರ ಹರಡುವಿಕೆಗೆ ಕಾರಣವಾದ ಕಾರ್ಯಕ್ರಮ * ನಿಯಂತ್ರಣ ನಿಯಮಗಳ ಕಟ್ಟುನಿಟ್ಟಿನ ಪಾಲನೆ– ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 14:41 IST
Last Updated 16 ಫೆಬ್ರುವರಿ 2021, 14:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಬೊಮ್ಮನಹಳ್ಳಿ ವಲಯದ ಎಸ್ಎನ್ಎನ್ ರಾಜ್ ಲೇಕ್ ವ್ಯೂ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನಿವಾಸಿಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 103ಕ್ಕೆ ಹೆಚ್ಚಳವಾಗಿದೆ. ಸೋಂಕಿತರಲ್ಲಿ ಆರು ಮಂದಿಯನ್ನು ಹೊರತುಪಡಿಸಿ ಉಳಿದವರೆಲ್ಲ 60 ವರ್ಷಗಳಿಗಿಂತ ಮೇಲಿನವರು.

ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಇತ್ತೀಚೆಗೆ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ 28 ಮಂದಿಗೆ ಕೋವಿಡ್‌ ದೃಢಪಟ್ಟಿತ್ತು. ಹಾಗಾಗಿ ಕಟ್ಟಡದಲ್ಲಿ ವಾಸವಿದ್ದ 1,052 ನಿವಾಸಿಗಳನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಒಟ್ಟು 103 ಕೊರೊನಾ ಸೋಂಕು ಹೊಂದಿರುವುದು ಪತ್ತೆಯಾಗಿದೆ.

‘ಕೋವಿಡ್‌ ದೃಢಪಟ್ಟವರಲ್ಲಿ 96 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು. ಸಭೆ ಸಮಾರಂಭಗಳಲ್ಲಿ ವಯಸ್ಸಾದವರು ಭಾಗವಹಿಸುವುದನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳನ್ನು ಚಾಚೂತಪ್ಪದೆ ಪಾಲನೆ ಮಾಡಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌ ತಿಳಿಸಿದರು.

ADVERTISEMENT

ಆರ್‌ಡಬ್ಲ್ಯುಎಗಳ ಜೊತೆ ವಿಡಿಯೊ ಸಂವಾದ

ಒಂದೇ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 100ಕ್ಕೂ ಅಧಿಕ ಮಂದಿಗೆ ಕೋವಿಡ್‌ ಹರಡಿದ ಪ್ರಕರಣವನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ( ಆರ್‌ಡಬ್ಲ್ಯುಎ) ಪ್ರಮುಖರ ಜೊತೆ ಪಾಲಿಕೆ ಆಯುಕ್ತರು ಮಂಗಳವಾರ ವಿಡಿಯೊ ಸಂವಾದ ನಡೆಸಿದರು. ಕೋವಿಡ್ ಹರಡುವಿಕೆಯನ್ನು ತಡೆಯಲು ಪಾಲಿಕೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಭಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದರು.
‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ, ಕಿರು ಸಭಾಂಗಣಗಳಲ್ಲಿ ಸಭೆ, ಸಮಾರಂಭಗಳನ್ನು ಆಯೋಜಿಸುವಾಗ ಅಲ್ಲಿ ಸೇರುವ ಜನರ ಸಂಖ್ಯೆಗೆ ಅನುಗುಣವಾಗಿ ಗಾಳಿಯಾಡುವ ವ್ಯವಸ್ಥೆ ಮಾಡಿಕೊಂಡಿರುವುದಿಲ್ಲ. ಕೋವಿಡ್‌ ಇರುವ ಒಬ್ಬ ವ್ಯಕ್ತಿ ಬಂದರೂ ಅವರಿಂದ ಇತರರಿಗೆ ಸುಲಭವಾಗಿ ಸೋಂಕು ಹರಡುತ್ತದೆ. ಸಭಾಂಗಣಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇದ್ದರೆ ಸೋಂಕು ಹರಡುವ ವೇಗ ಇನ್ನಷ್ಟು ತೀವ್ರವಾಗಿರುತ್ತದೆ’ ಎಂದು ಆಯುಕ್ತರು ತಿಳಿಸಿದರು.

‘ಸಭೆ ಸಮಾರಂಭಗಳಲ್ಲಿ ಹೆಚ್ಚು ಮಂದಿ ಬಾಗಿಯಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಜನರು ಪರಸ್ಪರ 3.25 ಚ.ಮೀ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂದು ಸಲಹೆ ನೀಡಿದರು.

ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಎಲ್ಲರೂ ಬಳಸುವ ಜಾಗ, ವ್ಯಾಯಾಮ ಕೇಂದ್ರಗಳಲ್ಲೂ ಕೋವಿಡ್‌ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳು ಕೈಗೊಳ್ಳಬೇಕು. ಆಗಾಗ್ಗೆ ಸೋಂಕು ನಿವಾರಕ ಸಿಂಪಡಿಸಬೇಕು. ಈಜುಕೊಳಗಳ ನಿರ್ವಹಣೆಗೂ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದರು.

ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ

ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡುಬಂದರೆ ಇತರರಿಂದ ಸ್ವಯಂ ಪ್ರತ್ಯೇಕಗೊಂಡು ಆರ್.ಟಿ.ಪಿ.ಸಿ.ಆರ್ ಅಥವಾ ಆರ್.ಎ.ಟಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಾಲಿಕೆಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 200 ಸಂಚಾರಿ ಪರೀಕ್ಷಾ ತಂಡಗಳಲ್ಲಿ ಈ ಪರೀಕ್ಷೆ ಉಚಿತ. ಕೋವಿಡ್‌ ಲಕ್ಷಣಗಳನ್ನು ಹೊಂದಿರುವವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಸೋಂಕಿನ ಲಕ್ಷಣಗಳಿಲ್ಲವಾದರೆ ಮನೆಯಲ್ಲೇ ಪ್ರತ್ಯೇಕವಾಗಿ ವಾಸವಿದ್ದು ಆರೈಕೆ ಪಡೆಯಬಹುದು.ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಹಾಸಿಗೆ ಕೊರತೆ ಈಗಿಲ್ಲ. ನುರಿತ ವೈದ್ಯರೂ ಲಭ್ಯ ಇದ್ದಾರೆ ಎಂದು ಆಯುಕ್ತರು ತಿಳಿಸಿದರು.

ಇನ್ನುಮುಂದೆ ಸೀಲ್‌ಡೌನ್‌ ಇಲ್ಲ

‘ನಗರದ ನಿವಾಸಿಗಳ ಸಹಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಸಾಧ್ಯವಾಗಿದೆ. ಕೋವಿಡ್ ಪ್ರಕರಣಗಳು ಕಂಡುಬರುವ ಪ್ರದೇಶಗಳಲ್ಲಿ ಇನ್ನು ಸೀಲ್ ಡೌನ್ ಮಾಡುವುದಿಲ್ಲ. ಮನೆ ಮುಂದೆ ಭಿತ್ತಿಪತ್ರ ಅಂಟಿಸುವ ಅಥವಾ ಬ್ಯಾರಿಕೇಡ್ ಳವಡಿಸುವ ಕ್ರಮಗಳನ್ನೂ ಕೈಬಿಟ್ಟಿದ್ದೇವೆ. ಕೋವಿಡ್‌ ದೃಢಪಟ್ಟರೆ ಏನು ಮುನ್ನೆಚ್ಚರಿಕೆ ವಹಿಸಬೇಕೆಂಬ ಬಗ್ಗೆ ನಾಗರಿಕರಿಗೆ ಅರಿವಿದೆ’ ಎಂದು ಮಂಜುನಾಥ ಪ್ರಸಾದ್‌ ಹೇಳಿದರು.

‘ಸೋಂಕಿತರ ಜೊತೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿದವರಿಗೆ ಕೋವಿಡ್ ಪರೀಕ್ಷೆ ಮಾಡಿ ಅವರ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಕಲ್ಪಿಸುತ್ತೇವೆ. ಏಳೂ ದಿನಗಳ ನಂತರ ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುತ್ತೇವೆ. ಅವರಲ್ಲಿ ಸೋಂಕು ಪತ್ತೆಯಾಗದಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದು ಬಿಬಿಂಎಂಪಿ ಆಯುಕ್ತರು ತಿಳಿಸಿದರು.

‘ನಿತ್ಯ 100ರಿಂದ 200 ಪ್ರಕರಣಗಳಷ್ಟೇ ಪತ್ತೆ’

‘ನಗರದಲ್ಲಿ ಆರೇಳು ತಿಂಗಳುಗಳ ಹಿಂದೆ ನಿತ್ಯ ಸರಾಸರಿ 6 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈ ಸಂಖ್ಯೆ ಈಗ100 ರಿಂದ 200 ಪ್ರಕರಣಗಳಿಗೆ ಇಳಿಕೆ ಕಂಡಿದೆ’ ಎಂದು ಆಯುಕ್ತರು ತಿಳಿಸಿದರು.

ಈ ಹಿಂದೆ ಕೋವಿಡ್‌ ಪರೀಕ್ಷೆಗೆ ಒಳಗಾದವರಲ್ಲಿ ಸೋಂಕು ಪತ್ತೆಯಾಗುತ್ತಿದ್ದ ಪ್ರಮಾಣ ಶೇ 24.15 ರಷ್ಟಿತ್ತು. ಈ ಸಂಖ್ಯೆ ಈಗ ಈಗ ಈ ಪ್ರಮಾಣ ಶೇ 0.80ಕ್ಕೆ ಇಳಿಕೆ ಕಂಡಿದೆ. ಈಗಲೂ ನಿತ್ಯ 20 ಸಾವಿರದಿಂದ 25 ಸಾವಿರ ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದುವರೆಗೆ 72 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದೇ ರೀತಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಿಸಲು ಸಹಕರಿಸಬೇಕು ಎಂದು ಅವರು ಕೋರಿದರು.

ವಿವಿಧ ಆರ್‌ಡಬ್ಲ್ಯುಎಗಳ 300 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು. ವಿಶೇಷ ಆಯುಕ್ತರು (ಆರೋಗ್ಯ) ರಾಜೇಂದ್ರ ಚೋಳನ್, ವಿಶೇಷ ಆಯುಕ್ತರು (ಕಸ ವಿಲೇವಾರಿ) ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ಸಲಹೆ ಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.