ADVERTISEMENT

ಮನೆಗಳಿಗೆ ನುಗ್ಗುವ ಕೆರೆಯ ‘ತ್ಯಾಜ್ಯ’ ನೀರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 19:45 IST
Last Updated 20 ಜುಲೈ 2021, 19:45 IST
ವಿಆರ್‌ಎನ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಅಂಗಳಕ್ಕೆ ನುಗ್ಗಿರುವ ಕೆರೆಯ ಕೊಳಚೆ ನೀರು.
ವಿಆರ್‌ಎನ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಅಂಗಳಕ್ಕೆ ನುಗ್ಗಿರುವ ಕೆರೆಯ ಕೊಳಚೆ ನೀರು.   

ಬೊಮ್ಮನಹಳ್ಳಿ: ಹೊಸೂರು ರಸ್ತೆಯ ಬೆರಟೇನ ಅಗ್ರಹಾರದ ಚೌಡೇಶ್ವರಿ ಕೆರೆಗೆ ತ್ಯಾಜ್ಯದ ನೀರು ಹರಿಸಲಾಗುತ್ತಿದ್ದು, ಕಲುಷಿತಗೊಂಡಿರುವ ನೀರು ರಸ್ತೆ ಹಾಗೂ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ನುಗ್ಗಿರುವುದರಿಂದ ನಿವಾಸಿಗಳಿಗೆ ಸಮಸ್ಯೆಯಾಗಿದೆ.

ಬೇಗೂರು ವಾರ್ಡ್‌ಗೆ ಒಳಪಡುವ ಈ ಕೆರೆಗೆ ವಿವಿಧ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ಗಾರ್ಮೆಂಟ್ಸ್ ಕಾರ್ಖಾನೆಗಳು ಹಾಗೂ ಮನೆಗಳ ತ್ಯಾಜ್ಯದ ನೀರು ಸೇರ್ಪಡೆಯಾಗುತ್ತಿದೆ. ಕೆರೆ ತುಂಬಿದಾಗ ಅಕ್ಕಪಕ್ಕದ ಬಡಾವಣೆಗಳಿಗೆ ಹರಿದು, ಜನರು ಮೂಗುಮುಚ್ಚಿ ನಡೆದಾಡುವ ಸ್ಥಿತಿ ಎದುರಾಗಿದೆ.

ಕೆರೆಗೆ ಹೊಂದಿಕೊಂಡಂತೆ ತಗ್ಗು ಪ್ರದೇಶದಲ್ಲಿರುವ ಗಂಗಮ್ಮ ಬಡಾವಣೆ, ಇಂದಿರಮ್ಮ ಬಡಾವಣೆ ಹಾಗೂ ಅಶ್ರೀತ್ ಬಡಾವಣೆಗಳಿಗೆ ಕೆರೆಯ ಕೊಳಚೆ ನೀರು ನುಗ್ಗಿತ್ತು. ಇದನ್ನು ತಪ್ಪಿಸಲು ಕೆರೆಯಿಂದ ಕಾಲುವೆ ತೋಡಿ, ನೀರನ್ನು ಖಾಲಿ ಜಾಗಕ್ಕೆ ಬಿಡಲಾಗಿತ್ತು. ಹೆಚ್ಚಾದ ನೀರು ಅಕ್ಕಪಕ್ಕದ ಖಾಲಿ ಜಾಗಗಳು, ರಸ್ತೆ ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯದ ಒಳಗೆ ನುಗ್ಗಿ ಕಿರಿಕಿರಿ ಉಂಟು ಮಾಡುತ್ತಿದೆ.

ADVERTISEMENT

‘ಈ ಭಾಗದಲ್ಲಿ ಕೆರೆಗೆ ನಿರ್ಮಾಣವಾಗಿದ್ದ 33 ಅಡಿಯ ರಾಜಕಾಲುವೆ ಈಗ ಕಣ್ಮರೆಯಾಗಿದೆ. ಬೇರೆ ಕೆರೆಯಿಂದ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಕುರುಹೂ ಇಲ್ಲದಂತಾಗಿದೆ. ಇದರಿಂದ ನೀರು ಬಡಾವಣೆಗಳಿಗೆ ನುಗ್ಗುತ್ತಿದೆ’ ಎನ್ನುವುದು ಸ್ಥಳೀಯ ನಿವಾಸಿಗಳ ಅಳಲು.

‘ಪಕ್ಕದ ಖಾಲಿ ಜಾಗಕ್ಕೆ ತ್ಯಾಜ್ಯದ ನೀರು ಬಿಟ್ಟಿದ್ದರಿಂದನಮ್ಮ ಅಪಾರ್ಟ್‌ಮೆಂಟ್‌ ತಡೆಗೋಡೆ ಬಿರುಕು ಬಿಟ್ಟಿದೆ. ಕುಡಿಯುವ ನೀರಿನ ಸಂಪ್‌ಗೂ ಕೊಳಚೆ ನೀರು ಸೇರಿ, ಬಳಕೆಗೆ ಯೋಗ್ಯವಾಗಿ ನೀರಿಗಾಗಿ ಪರದಾಡುವಂತಾಗಿದೆ. ವಾಸನೆಗೆ ಹೊರ ಬರಲು ಕಷ್ಟವಾಗುತ್ತಿದೆ’ ಎಂದು ಅಪಾರ್ಟ್‌ಮೆಂಟ್‌ ನಿವಾಸಿ ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಎಂ.ರಾಮಕೃಷ್ಣ, ‘ಕೆಲ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ತ್ಯಾಜ್ಯ ನೀರನ್ನು ಕೆರೆಗೆ ಹರಿಸುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಕೆರೆ ನಿರ್ವಹಣೆ ಹಾಗೂ ಬೃಹತ್ ನೀರುಗಾಲುವೆ ವಿಭಾಗಕ್ಕೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ’ ಎಂದರು.

ಚೌಡೇಶ್ವರಿ ಕೆರೆ ಅತಿಕ್ರಮಣದಾರರ ದಾಳಿಯಿಂದ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಇದರ ವಿರುದ್ಧ ಎರಡು ವರ್ಷಗಳ ಹಿಂದೆ ಸ್ಥಳೀಯ ನಿವಾಸಿಗಳು ದೂರು ಸಲ್ಲಿಸಿದ್ದರು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.