ಬೆಂಗಳೂರು: ವಿಧಾನಸಭೆ ಸಚಿವಾಲಯವು ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಫೆಬ್ರುವರಿ 27ರಿಂದ ಮಾರ್ಚ್ 3ರವರೆಗೆ ಪುಸ್ತಕ ಮೇಳ ಹಮ್ಮಿಕೊಂಡಿದೆ. ಐದು ದಿನಗಳ ಮೇಳವು ಸಾಹಿತ್ಯ ಲೋಕದ ವಿವಿಧ ಆಯಾಮಗಳನ್ನು ಪರಿಚಯಿಸಲಿದೆ.
ಗುರುವಾರ ಸಂಜೆ 4 ಗಂಟೆಗೆ ಮೇಳಕ್ಕೆ ಚಾಲನೆ ದೊರೆಯಲಿದೆ. ಶುಕ್ರವಾರದಿಂದ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮೇಳ ನಡೆಯಲಿದೆ. ಪುಸ್ತಕ ಪ್ರದರ್ಶನ, ಸಂವಾದ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಿವಿಧ ಪ್ರಕಾಶನ ಸಂಸ್ಥೆಗಳ ಮಳಿಗೆಗಳ ಜತೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ವಿವಿಧ ಅಕಾಡೆಮಿಗಳಿಗೆ ಸಂಬಂಧಿಸಿದ ಮಳಿಗೆಗಳೂ ಇರಲಿವೆ. 150ಕ್ಕೂ ಅಧಿಕ ಮಳಿಗೆಗಳಲ್ಲಿ ಕನ್ನಡ ಹಾಗೂ ಇತರೆ ಎಲ್ಲ ಭಾಷೆಯ ಪುಸ್ತಕಗಳ ಮಾರಾಟವೂ ಇರಲಿದ್ದು, ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ ನಡೆಯಲಿದೆ. ಸಾಹಿತ್ಯ, ಕಲೆ, ಸಂಗೀತ, ರಾಜಕೀಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ಈ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ.
ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲು ಮೇಳದಲ್ಲಿ ಒಂದು ಮಳಿಗೆ ಇರಲಿದೆ. ಇಲ್ಲಿ ವಿವಿಧ ಲೇಖಕರ ಪುಸ್ತಕಗಳು ಬಿಡುಗಡೆಯಾಗಲಿದೆ. ಮೊದಲ ದಿನವಾದ ಗುರುವಾರ ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಎರಡು ವೇದಿಕೆಗಳಲ್ಲಿ ಸಂವಾದ ಗೋಷ್ಠಿಗಳು ನಡೆಯಲಿವೆ. ಎರಡನೇ ದಿನವಾದ ಶುಕ್ರವಾರ ನಾಲ್ಕು ಸಂವಾದಗಳು ನಡೆಯಲಿವೆ. ‘ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಜವಾಬ್ದಾರಿ’, ‘ಸಮಕಾಲೀನ ಪ್ರಕಾಶನ ಕ್ಷೇತ್ರದ ಸವಾಲುಗಳು’, ‘ನಾಯಕತ್ವ–ಇಂದು ಮತ್ತು ನಾಳೆ’ ಹಾಗೂ ‘ನೆಲಮೂಲದಿಂದ ಅಂತರಿಕ್ಷದವರೆಗೆ’ ವಿಷಯದ ಮೇಲೆ ಸಂವಾದ ಹಮ್ಮಿಕೊಳ್ಳಲಾಗಿದೆ. ಸಂಜೆ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಶನಿವಾರವೂ ನಾಲ್ಕು ಸಂವಾದ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ‘ಪರಿಸರದ ಅಳಿವು–ಉಳಿವು’, ‘ಸಂವಿಧಾನದ ಹಿರಿಮೆ ಗರಿಮೆ ಹಾಗೂ ಅರಿವು’, ‘ಕ್ರೀಡೆ ಮತ್ತು ಸಾಹಿತ್ಯ’, ‘ಕೃತಕ ಬುದ್ಧಿಮತ್ತೆ/ ಸೈಬರ್ ಭದ್ರತೆ’ ವಿಷಯಗಳ ಮೇಲೆ ಸಂವಾದ ನಡೆಯಲಿದೆ.
ಭಾನುವಾರ ‘ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವದ ಚಿಂತನೆಗಳು’, ‘ಮಕ್ಕಳ ಸಾಹಿತ್ಯ’, ‘ಅಂಗಾಂಗ ದಾನದ ಅರಿವು’, ‘ಸಾಹಿತ್ಯ ಮತ್ತು ಚಲನಚಿತ್ರ’ ಹಾಗೂ ‘ಓದಿನ ಸುಖ’ ವಿಷಯದ ಮೇಲೆ ಸಂವಾದಗಳು ನಡೆಯಲಿವೆ. ಬಳಿಕ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಸಂಜೆ 5 ಗಂಟೆಯಿಂದ ಅರ್ಜುನ್ ಜನ್ಯ, ಸಾಧುಕೋಕಿಲ ಹಾಗೂ ಸಂಗಡಿಗರಿಂದ ಸಂಗೀತ ಸಂಜೆ ನಡೆಯಲಿದೆ.
ಸಾರ್ವಜನಿಕರಿಗೆ ಉಚಿತ ಪ್ರವೇಶ
ಫೆ.28ರಿಂದ ಮಾರ್ಚ್ 2ರವರೆಗೆ ಪುಸ್ತಕ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ. ಮಾರ್ಚ್ 3ರಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪುಸ್ತಕ ಮೇಳ ವೀಕ್ಷಿಸಲಿದ್ದಾರೆ. ವಿಧಾನಮಂಡಲದ ಉಭಯ ಸದನಗಳ ಸದಸ್ಯರು ಮೇಳದಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.