ADVERTISEMENT

‘ಜ್ಞಾನ ವಿರೋಧಿ ಸಮಾಜವಾಗುತ್ತಿರುವ ಭಾರತ’

ವಿಮರ್ಶಕ ರಹಮತ್ ತರೀಕೆರೆ ಕಳವಳ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 19:06 IST
Last Updated 6 ಜನವರಿ 2020, 19:06 IST
ಹಿರಿಯ ಕಲಾವಿದ ಪ.ಸ. ಕುಮಾರ್ (ಎಡದಿಂದ ನಾಲ್ಕನೆಯವರು) ಪುಸ್ತಕಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) ಸಂಶೋಧಕ ಎಚ್.ಎಸ್. ಗೋಪಾಲರಾವ್, ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಲೇಖಕ ನಾಗ ಐತಾಳ, ಕಥನಕಾರ ಶ್ರೀಧರ ಬಳಿಗಾರ್, ವಿಮರ್ಶಕ ರಹಮತ್ ತರೀಕೆರೆ ಇದ್ದರು -ಪ್ರಜಾವಾಣಿ ಚಿತ್ರ
ಹಿರಿಯ ಕಲಾವಿದ ಪ.ಸ. ಕುಮಾರ್ (ಎಡದಿಂದ ನಾಲ್ಕನೆಯವರು) ಪುಸ್ತಕಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) ಸಂಶೋಧಕ ಎಚ್.ಎಸ್. ಗೋಪಾಲರಾವ್, ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಲೇಖಕ ನಾಗ ಐತಾಳ, ಕಥನಕಾರ ಶ್ರೀಧರ ಬಳಿಗಾರ್, ವಿಮರ್ಶಕ ರಹಮತ್ ತರೀಕೆರೆ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತವು ಬುದ್ಧಿ ವಿರೋಧಿ ಮತ್ತು ಜ್ಞಾನ ವಿರೋಧಿ ಸಮಾಜವಾಗಿ ಪರಿವರ್ತನೆಯಾಗುತ್ತಿದೆ’ ಎಂದು ವಿಮರ್ಶಕ ರಹಮತ್ ತರೀಕೆರೆ ಕಳವಳ ವ್ಯಕ್ತಪಡಿಸಿದರು.

ಅಭಿನವ ಪ್ರಕಾಶನ ಸೋಮವಾರ ಆಯೋಜಿಸಿದ್ದ ‘ಬೆಳ್ಳಿ ಬೆಡಗು ಮಾಲಿಕೆಯ ಮೂರನೇ ಕಂತಿನ ಕೃತಿಗಳಾದ ಶ್ರೀಧರ ಬಳಿಗಾರ್ ಅವರ ‘ಮೃಗಶಿರ’, ರಹಮತ್ ತರೀಕೆರೆ ಅವರ ‘ನ್ಯಾಯನಿಷ್ಠುರಿಗಳ ಜತೆಯಲ್ಲಿ ಹದಿನೈದು ಮಾತುಕತೆಗಳು’, ಎಚ್.ಎಸ್. ಗೋಪಾಲರಾವ್ ಅವರ ‘ಶಾಸನ ಅಧ್ಯಯನ ಕೆಲ ಹೆಜ್ಜೆ ಗುರುತುಗಳು’, ನಾಗ ಐತಾಳ ಅವರ ‘ಕಾಲ ಉರುಳಿ ಉಳಿದುದು ನೆನಪಷ್ಟೇ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿವಾದಾತ್ಮಕ ಸಂಗತಿಗಳಲ್ಲಿಯೇ ದೇಶ ತನ್ನ ಶಕ್ತಿ ಮತ್ತು ಚೈತನ್ಯವನ್ನು ಕಳೆದುಕೊಳ್ಳುತ್ತಿದೆ. ಹೆಸರಾಂತ ಲೇಖಕರು ಬರೆದಿರುವ ಒಂದೇ ಒಂದು ಸಾಲನ್ನೂ ಓದದೆಯೇ ಅವರನ್ನು ತುಚ್ಚವಾಗಿ ಕಾಣುವ ಮತ್ತು ಅವರ ಹತ್ಯೆ ಮತ್ತು ಸಾವನ್ನು ಸಂಭ್ರಮಿಸುವ ಸಮೂಹ ಸೃಷ್ಟಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸಂವಾದ ಮತ್ತು ವಾಗ್ವಾದದ ಮೂಲಕ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶಗಳು ಎಲ್ಲ ಕಾಲದಲ್ಲೂ ಇದ್ದವು. ಆದರೆ, ನಾವೀಗ ವಿವಾದಗಳ ಕಾಲದಲ್ಲಿ ಬದುಕುತ್ತಿದ್ದೇವೆ. ಒಂದು ಸಿದ್ಧಾಂತ ನಂಬಿರುವ ಗುಂಪಿನ ಮಾತನ್ನು ಇನ್ನೊಂದು ಗುಂಪು ಕೇಳಿಸಿಕೊಳ್ಳದ ಕಾಲಘಟ್ಟದಲ್ಲಿದ್ದೇವೆ’ ಎಂದರು.

‘ರಾಜಕಾರಣ ಮತ್ತು ಧರ್ಮದ ವಿಷಯದಲ್ಲಿ ಒಬ್ಬರ ಮಾತನ್ನು ಮತ್ತೊಬ್ಬರು ಕೇಳಿಸಿಕೊಳ್ಳುವ ಮತ್ತು ತಪ್ಪನ್ನು ತಿದ್ದಿಕೊಳ್ಳುವ ಅಗತ್ಯವಿದೆ. ಸಂವಾದ ಮತ್ತು ವಾಗ್ವಾದದ ಭಾರತವನ್ನು ಮತ್ತೆ ಕಟ್ಟುವ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.

ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಸಂವಿಧಾನದ ನೆಲೆಯಲ್ಲಿ ಇಂದು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಮಾಲಿಕೆಯಲ್ಲಿ ಸಂವಿಧಾನದ ಬಗ್ಗೆ ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶ ಇದೆ’ ಎಂದು ತಿಳಿಸಿದರು.

ಬಿಡುಗಡೆಯಾದ ಕೃತಿಗಳು

ಮೃಗಶಿರ: ಪುಟ –280, ₹280

ನ್ಯಾಯನಿಷ್ಠುರಿಗಳ ಜತೆಯಲ್ಲಿ ಹದಿನೈದು ಮಾತುಕತೆಗಳು: ‍ಪುಟ–308, ₹300

ಶಾಸನ ಅಧ್ಯಯನ ಕೆಲ ಹೆಜ್ಜೆ ಗುರುತುಗಳು: ಪುಟ– 248, ₹250

ಕಾಲ ಉರುಳಿ ಉಳಿದುದು ನೆನಪಷ್ಟೇ: ಪುಟ–236, ₹250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.